ಛಲವಾದಿ ಮಹಾಸಭಾ ತಳಮಟ್ಟದಿಂದ ಸದೃಢಗೊಳಿಸಿ

oppo_2
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮದ್ದೂರು ತಾಲೂಕು ಛಲವಾದಿ ಮಹಾಸಭಾ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಯೋಗೇಶ್, ಕೃಷ್ಣ, ನಾಗಭೂಷಣ್, ಮಹದೇವಯ್ಯ, ರಾಜೇಂದ್ರ, ಪ್ರಸನ್ನ, ಪ್ರಸಾದ್, ಮಹದೇವ್, ಕೃಷ್ಣ ಇದ್ದರು.
Published on

ಮದ್ದೂರು: ತಾಲೂಕು ಛಲವಾದಿ ಮಹಾಸಭಾವನ್ನು ತಳಮಟ್ಟದಿಂದ ಸದೃಢಗೊಳಿಸಲು ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಂಘದ ಕಾರ್ಯದರ್ಶಿ ಯೋಗೇಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಸಮಿತಿಯ ತುರ್ತು ಸಭೆ ಹಾಗೂ ಸಂಘದ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾಸಭಾವನ್ನು ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ, ಪಟ್ಟಣ ಹಾಗೂ ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹೋಬಳಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ 2,100 ಸದಸ್ಯತ್ವವನ್ನು ನಿಗದಿ ಮಾಡಲಾಗಿದೆ. ತಾಲೂಕಿನಲ್ಲಿ ಸುಮಾರು 50 ಸಾವಿರ ಭೀಮ ಬಂಧುಗಳಿದ್ದು, ನಾವುಗಳು ಪ್ರತಿ ಗ್ರಾಮಗಳ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕಿದೆ ಎಂದರು.

ಸಂಘದ ನಿರ್ದೇಶಕ ನಾಗಭೂಷಣ್ ಮಾತನಾಡಿ, ಮಹಸಭಾದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಮತ್ತು ಮಹಾಸಭಾದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕಿನ ಛಲವಾದಿ ಮಹಾಸಭಾದ ಮಾಚಹಳ್ಳಿ ಜೋಗಯ್ಯ ಅವರು ಇತ್ತೀಚೆಗೆ ನಿಧನರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಗೌರವ ಕಾರ್ಯದರ್ಶಿ ಕೃಷ್ಣ, ನಿರ್ದೇಶಕರಾದ ನಾಗಭೂಷಣ್, ಮಹದೇವಯ್ಯ, ರಾಜೇಂದ್ರ, ಪ್ರಸನ್ನ, ಪ್ರಸಾದ್, ಮಹದೇವ್, ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net