ಸಹಕಾರ ಸರಪಳಿ ಸದೃಢಗೊಳಿಸಿ

ಆಲೂರು ತಾಲೂಕಿನ ಪಾಳ್ಯ ಹೋಬಳಿ ಟಿ. ಗುಡ್ಡೆನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪರಮೇಶ್ವರಪ್ಪ ಹಾಗೂ ಪದ್ಮಾವತಿ ಅವರನ್ನು ಗೌರವಿಸಲಾಯಿತು.
ಆಲೂರು ತಾಲೂಕಿನ ಪಾಳ್ಯ ಹೋಬಳಿ ಟಿ. ಗುಡ್ಡೆನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪರಮೇಶ್ವರಪ್ಪ ಹಾಗೂ ಪದ್ಮಾವತಿ ಅವರನ್ನು ಗೌರವಿಸಲಾಯಿತು.
Published on

 ಆಲೂರು: ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಉತ್ಪಾದಕರು ಉತ್ತಮ ಬೆಲೆ ಪಡೆಯುವುದರ ಜತೆಗೆ ಸಹಕಾರ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು ಎಂದು ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲ್ವಿಚಾರಕ ಪುಟ್ಟರಾಜು ತಿಳಿಸಿದರು.

ತಾಲೂಕಿನ ಪಾಳ್ಯ ಹೋಬಳಿ ಟಿ.ಗುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಅನ್ನದಾತರು ಜೀವನ ನಿರ್ವಹಣೆಗಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ಇನ್ನು ಕೆಲವು ರೈತರು ದೊಡ್ಡ ಮಟ್ಟದಲ್ಲಿ ಹೈನೋದ್ಯಮ ಮಾಡಿಕೊಂಡಿದ್ದಾರೆ. ಗುಣಮಟ್ಟದ ಹಾಲು ಪೂರೈಕೆಯೇ ಈ ಉದ್ಯಮದ ಆಧಾರ ಸ್ತಂಭವಾಗಿದೆ. ಆದ್ದರಿಂದ ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ಸರಪಳಿಯನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ನಾಗರಾಜ್ ವಾರ್ಷಿಕ ವರದಿ ಮಂಡಿಸಿ, 2024-25ನೇ ಸಾಲಿನಲ್ಲಿ ಸಂಘದ ನೋಂದಾಯಿತ ಸದಸ್ಯರ ಸಹಕಾರದಿಂದ ಪ್ರಸ್ತುತ ಉತ್ತಮ ವಹಿವಾಟು ನಡೆಸುವ ಮೂಲಕ ನಿವ್ವಳ 3.36.483 ರೂ.ಗಳ ಆದಾಯ ಗಳಿಸುವ ಮೂಲಕ ಹಾಸನ ಹಾಲು ಒಕ್ಕೂಟದಲ್ಲಿ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ಸ್ಥಾನಮಾನ ಪಡೆದುಕೊಂಡು ಪ್ರಸ್ತುತ ಸುಮಾರು 20 ಲಕ್ಷ ರೂ.ಗಳವರೆಗೂ ಲಾಭದಲ್ಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಕಣಗಾಲು ಡೇರಿ ಮಾಜಿ ಅಧ್ಯಕ್ಷ ದಿ.ಗಂಗಪ್ಪ( ಪುಟ್ಟೇಗೌಡ) ಅವರ ಪತ್ನಿ ಪದ್ಮಾವತಿ ಅವರನ್ನು ಮತ್ತು ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಹಾಗೂ ಡೇರಿ ಮೇಲ್ವಿಚಾರಕ ಪುಟ್ಟರಾಜು ಅವರನ್ನು ಇದೇ ವೇಳೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕಕಣಗಾಲು ಡೇರಿ ಅಧ್ಯಕ್ಷ ರವಿಪ್ರಕಾಶ್, ನಿರ್ದೇಶಕರಾದ ಮಹೇಶ್ವರಪ್ಪ, ತೀರ್ಥ ಕಟ್ಟೆಗಿಡ, ಗುರು, ಚಂದ್ರು, ಮಾಳಿಗಯ್ಯ, ಬಸವರಾಜು, ಸಿದ್ದಮ್ಮ, ಸುಶೀಲಮ್ಮ ಸೋಮಶೇಖರ್, ಮಾಜಿ ಅಧ್ಯಕ್ಷರಾದ ಅಣ್ಣಪ್ಪ, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net