

ಕಡೂರು: ರಾಜ್ಯದ ಅಭಿವೃದ್ಧಿಯನ್ನು ಶೂನ್ಯವಾಗಿಸಿಕೊಂಡು ಅಸಮರ್ಥವಾದ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಹೆಚ್ಚಿನ ಬಲ ತುಂಬಲು ವಿಧಾನ ಪರಿಷತ್ತಿನಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಹೆಚ್ಚು ಅಗತ್ಯತೆ ಇದೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.
ಪಟ್ಟಣದ ಸುರುಚಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ಅಸಮರ್ಥವಾದ ಹಾಗೂ ಅಭಿವೃದ್ಧಿ ಶೂನ್ಯ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನಸಾಮಾನ್ಯರು ಬೇಸತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಡುವುದಕ್ಕೆ ಪೂರಕವಾಗಿ ನೈಋತ್ಯ ಪಧವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರು ಸೂಕ್ಷ್ಮತೆಯನ್ನು ಯೋಚಿಸಿ ನಮ್ಮ ಮೈತ್ರಿ ಅಭ್ಯರ್ಥಿಗಳಾದ ಪಧವೀದರ ಕ್ಷೇತ್ರದ ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸಿ ಎನ್‌ಡಿಎಗೆ ಹೆಚ್ಚಿನ ಬಲ ತುಂಬಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ವಿಧಾನಸಭೆಯಲ್ಲಿ ಸಂಖ್ಯೆ ಹೆಚ್ಚಿದೆ ಎಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಕಾಂಗ್ರೆಸ್ ಪಕ್ಷ ಬೇಕಾಬಿಟ್ಟಿ ಮಸೂದೆಗಳನ್ನು ಪಾಸ್ ಮಾಡುತ್ತಿದೆ. ಅದನ್ನು ತಡೆಯಬೇಕೆಂದರೆ ವಿಧಾನಸಭೆಯ ಜತೆ ವಿಧಾನ ಪರಿಷತ್ತಿನಲ್ಲೂ ನಮ್ಮ ಸಂಖ್ಯೆ ಹೆಚ್ಚಬೇಕಿದೆ. ದುರಾಡಳಿತ, ದುರಹಂಕಾರದ ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಇದು ಅತ್ಯಗತ್ಯವಾಗಿದೆ. ನಮ್ಮ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ಸಾಮಾಜಿಕವಾಗಿ ನನ್ನ ಕೈಲಾದ ಸೇವೆಯನ್ನು ಮಾಡುತ್ತಿದ್ದೇನೆ. ಮತ್ತಷ್ಟು ಸೇವೆ ಮಾಡಲು ವಿಧಾನ ಪರಿಷತ್ ಸದಸ್ಯತ್ವ ಪೂರಕವೆಂಬ ಕಾರಣದಿಂದ ಮತ್ತು ರಾಷ್ಟ್ರ ಸೇವೆಯ ಅಭಿಲಾಷೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎಲ್ಲ ಮುಖಂಡರ ಮತ್ತು ಕಾರ್ಯಕರ್ತರ ಬೆಂಬಲದಿಂದ ಗೆಲುವು ಪಡೆಯುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಪಕ್ಷದ ಆಸ್ತಿಯಾಗಿರುವ ಕಾರ್ಯಕರ್ತರೇ ಪ್ರತಿ ಬೂತ್‌ನಲ್ಲಿ ತಾವೇ ಅಭ್ಯರ್ಥಿಗಳೆಂದು ಪರಿಗಣಿಸಿಕೊಂಡು ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕಿದೆ. ನಾನೊಬ್ಬ ವೈದ್ಯನಾಗಿದ್ದರೂ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರಿತಿದ್ದೇನೆ. ಅವುಗಳ ಧ್ವನಿಯಾಗಿ ನಿಲ್ಲುವೆ ಎಂದು ಹೇಳಿದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಬಹಳಷ್ಟು ಹೋರಾಟ ನಡೆಸಿದ್ದೇನೆ. ಶಿಕ್ಷಕರ ಧ್ವನಿಯಾಗಿ ಮುಂದೆಯೂ ಕಾರ್ಯ ನಿರ್ವಹಿಸುತ್ತೇನೆ ಎಂದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಕಡೂರು ಕ್ಷೇತ್ರದಲ್ಲಿ ಶೇ.80 ಮತ ದೊರಕಿಸಿ ಕೊಡುವ ಜವಾಬ್ದಾರಿ ನಮ್ಮದು. ಗೆಲುವು ಸಾಧಿಸಿದ ನಂತರ ಇಬ್ಬರೂ ಅಭ್ಯರ್ಥಿಗಳು ವಿಧಾನ ಪರಿಷತ್ತಿನಲ್ಲಿ ಪದವೀಧರರ ಮತ್ತು ಶಿಕ್ಷಕರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣೆಯನ್ನು ಕ್ಷೇತ್ರದಲ್ಲಿ ಸಮರ್ಥವಾಗಿ ಎದುರಿಸಲು ಪಕ್ಷದ ವತಿಯಿಂದ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಪ್ರಕೋಷ್ಟಗಳ ರಾಜ್ಯ ಸಂಚಾಲಕ ದತ್ತಾತ್ರಿ, ಮಾಜಿ ಶಾಸಕ ಡಿ.ಎಸ್. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಜಿಲ್ಲಾ ಉಪಾಧ್ಯಕ್ಷ ರಾಜಾನಾಯ್ಕ, ಎಚ್.ಸಿ.ಕಲ್ಮುರಡಪ್ಪ, ಕುರುಬಗೆರೆ ಮಹೇಶ್ ಇತರರಿದ್ದರು.