

ಬೆಳಗಾವಿ: ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆಯುವುದು ಅಷ್ಟೇ ಅಲ್ಲ. ನಮ್ಮ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ ಸದೃಢಗೊಳಿಸಿ ರೈತ ಸ್ನೇಹಿ ಮಾಡಬೇಕು ಎಂದು ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ ಕಮ್ಮರಡಿ ಒತ್ತಾಯಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ವೇಳೆ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ. ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮಾರಾಟ ಈ ಪ್ರಾಂಗಣದಲ್ಲಿ ನಡೆಯಬೇಕು. ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಎಪಿಎಂಸಿಗೆ ಬಂದರೆ ವರ್ತಕರು ಅದನ್ನು ಖರೀದಿಸಿ ಇಲ್ಲಿಯೇ ಮಾರಾಟ ಮಾಡುತ್ತಾರೆ. ಅದು ಬೇಡ ಎನ್ನುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ನಿರ್ಧಾರ ಮಾಡಿ ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದರು. ರೈತರಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆ ಹಿಂಪಡೆಯುವ ನಿರ್ಧಾರ ಮಾಡಿದ್ದು ರೈತರಿಗೆ ಹಾಗೂ ವರ್ತಕರಲ್ಲಿ ಸಂತಸ ತಂದಿದೆ ಎಂದರು
ತಾಲೂಕು ಮಟ್ಟದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ಕೃಷಿ ಉತ್ಪನ್ನ ತರಲು ರೈತರಿಗೆ ಕಷ್ಟವಾಗಿದೆ. ಅದಕ್ಕೆ ಪರಿಹಾರವಾಗಿ ಆದಷ್ಟು ಬೇಗ ರೈತರ ಸಮೀಪಕ್ಕೆ ಎಪಿಎಂಸಿ ಶಾಖೆ ತೆರೆಯಬೇಕು. ರೈತರನ್ನು ಒಗ್ಗೂಡಿಸಿ ಉತ್ಪಾದಕರ ಸಂಘ ರಚಿಸಬೇಕು. ಸಂಪೂರ್ಣ ಉಚಿತವಾಗಿ ಸರ್ಕಾರವೇ ಕೃಷಿ ಉತ್ಪನ್ನ ಸಾಗಣೆ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿದರು.
ರೈತ ಬೆಳೆದಿರುವ ಉತ್ಪನ್ನಗಳ ಶೇಖರಣೆ ಪ್ರಮಾಣದ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ಅಡಮಾನ ಸಾಲ ವ್ಯವಸ್ಥೆ ಸಮರ್ಪಕವಾಗಿ ಜಾರಿಗೆ ತರಬೇಕು. ರೈತ ಪಡೆದಿರುವ ಬೆಳೆಸಾಲ ಮತ್ತು ಮಾಡಿರುವ ಉತ್ಪನ್ನದ ಶೇಖರಣೆ ಇವೆರಡರ ನಡುವೆ ಸಂಬಂಧ ಏರ್ಪಡಿಸಿ ಸಾಲ ವಸೂಲಾತಿ ಕ್ರಮವನ್ನು ರೈತ ಸ್ನೇಹಿ ಮಾಡುವ ಜವಾಬ್ದಾರಿ ಸರ್ಕಾರದ್ದು ಎಂದರು.
ಚಾರ್ಟೆಡ್ ಅಕೌಂಟೆಂಟ್ ಜಿ.ವಿ. ಕುಲಕರ್ಣಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ಎಪಿಎಂಸಿ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ, ಶಿವಲೀಲಾ ಮಿಸಾಳೆ ಸುದ್ದಿಗೋಷ್ಠಿಯಲ್ಲಿದ್ದರು.