ನವೋದಯ ಎಕ್ಸಾಂ ತಯಾರಿಗೆ ಹಳೇ ವಿದ್ಯಾರ್ಥಿಗಳ ಬಲ

14 smg 9
ಹುಂಚದಲ್ಲಿ ನವೋದಯ ಪರೀಕ್ಷೆಗೆ ಮಕ್ಕಳಿಗೆ ತರಬೇತಿ ನೀಡುತ್ತಿರುವುದು.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ನವೋದಯ ಶಾಲೆಗಳಿಗೆ ದಾಖಲಾತಿ ಪಡೆಯುವುದು ಸುಲಭವಲ್ಲ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ನವೋದಯ ಪರೀಕ್ಷೆ ಎಂಬುದು ಕಬ್ಬಿಣದ ಕಡಲೆ ಆಗಿದೆ. ಆದರೆ ಇದೀಗ ಕಿಡ್ ಫಾರ್ ಬ್ರೈನ್ ಕಲ್ಪನೆಯೊಂದಿಗೆ ಸಮಾನ ಮನಸ್ಕರ ತಂಡ(ನವೋದಯ ಶಾಲೆ ಹಳೇ ವಿದ್ಯಾರ್ಥಿಗಳು)ವೊಂದು ಮಲೆನಾಡಿನಲ್ಲಿ ಸದ್ದಿಲ್ಲದೆ ಶ್ರಮಿಸುತ್ತಿದ್ದು ಉಚಿತ ತರಬೇತಿ ನೀಡುವ ಮೂಲಕ ನೂರಾರು ಮಕ್ಕಳ ಭವಿಷ್ಯಕ್ಕೆ ದಾರಿದೀಪ ಆಗುತ್ತಿದೆ.

ರಾಜ್ಯದಲ್ಲಿ 31 ನವೋದಯ ಶಾಲೆಗಳಿದ್ದು, ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಶಾಲೆಗಳಲ್ಲಿ 6ರಿಂದ 12ನೇ (ಪಿಯುಸಿ) ತರಗತಿವರೆಗೆ ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಆದರೆ ಕರೊನಾ ಬಳಿಕ ರಾಜ್ಯಾದ್ಯಂತ ನವೋದಯ ಶಾಲೆಗಳಿಗೆ ಮಕ್ಕಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ತಗ್ಗುತ್ತಿದೆ. ಆ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ನವೋದಯ ಶಾಲೆಗಳು ಎರಡ್ಮೂರು ಬಾರಿ ನೋಟಿಫಿಕೇಶನ್ ಹೊರಡಿಸುತ್ತಿವೆ. ಇದನ್ನರಿತ ಹಳೇ ವಿದ್ಯಾರ್ಥಿಗಳು ನವೋದಯ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುವ ಮಕ್ಕಳಿಗೆ ಪ್ರವೇಶ ಪರೀಕ್ಷೆಗಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ(ಹೊಂಬುಜ)ದಲ್ಲಿ ಉದಯಿಸಿದ ಕಲ್ಪನೆ, ಇದೀಗ ಎರಡು ವರ್ಷದಲ್ಲಿ ತೀರ್ಥಹಳ್ಳಿ (ಕೋಣಂದೂರು) ಮತ್ತು ಶಿಕಾರಿಪುರ(ನೆಲವಾಗಿಲು) ತಾಲೂಕಿಗಳಿಗೂ ವಿಸ್ತರಣೆ ಆಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯಾದ್ಯಂತ ಉಚಿತವಾಗಿ ತರಬೇತಿ ನೀಡುವ ಸಂಕಲ್ಪವನ್ನು ಹಳೇ ವಿದ್ಯಾರ್ಥಿಗಳು ಮಾಡಿಕೊಂಡಿದ್ದಾರೆ. ಆಯಾ ಜಿಲ್ಲೆಗಳ ನವೋದಯ ಹಳೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ವೈದ್ಯರು, ಪಾಲಕರ ಸಹಯೋಗದೊಂದಿಗೆ ವಿದ್ಯಾರ್ಥಿಗಳನ್ನು ನವೋದಯ ಪರೀಕ್ಷೆಗೆ ತಯಾರಿ ಮಾಡುವ ಕನಸು ಹೊತ್ತಿದ್ದಾರೆ.
ಪ್ರಸ್ತುತ ನವೋದಯ ಶಾಲೆ ಪ್ರತಿ ಮಗುವಿಗೆ ಒಂದು ವರ್ಷಕ್ಕೆ ಕೇಂದ್ರ ಸರ್ಕಾರ 80 ಸಾವಿರ ರೂ. ವಿನಿಯೋಗ ಮಾಡುತ್ತಿದೆ. ಮೊರಾರ್ಜಿ ದೇಸಾಯಿ ಶಾಲೆಯ ಮಗುವಿಗೆ 40ರಿಂದ 50 ಸಾವಿರ ರೂ. ನೀಡುತ್ತಿದೆ. ಗ್ರಾಮೀಣ ಭಾಗದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಕಲ್ಪನೆಯೊಂದಿಗೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಕ್ಕೆ ತರಬೇತಿ ನೀಡಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಸಹಕಾರಿ
5ನೇ ತರಗತಿ ಉತ್ತೀರ್ಣರಾಗಿರುವ ಸಾವಿರಾರು ವಿದ್ಯಾರ್ಥಿಗಳು ನವೋದಯ ಪರೀಕ್ಷೆ ತೆಗೆದುಕೊಳ್ಳಲು ಅರ್ಹರು. ಅರ್ಜಿ ಹಾಕುವ ಗ್ರಾಮೀಣ ಭಾಗದ ಬಹಳಷ್ಟು ಮಕ್ಕಳು ಪೂರ್ವ ತಯಾರಿ ಮಾಡಿಕೊಳ್ಳದೇ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಹಾಗಾಗಿ ಹಳೇ ವಿದ್ಯಾರ್ಥಿಗಳು ಸುತ್ತಮುತ್ತಲಿನ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಮತ್ತು ಪಾಲಕರ ಮನವೊಲಿಸಿ ಮಕ್ಕಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪ್ರವೇಶಕ್ಕೆ ತರಬೇತಿ ನೀಡುತ್ತಿದ್ದಾರೆ. ಎರಡು ವರ್ಷದಲ್ಲಿ 77 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದು ಮೂವರು ನವೋದಯ ಮತ್ತು 18 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ ಆಗಿದ್ದಾರೆ. ಇದು ಮಕ್ಕಳ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಸಹಕಾರಿ ಆಗಲಿದೆ ಎನ್ನುವುದು ಹಳೇ ವಿದ್ಯಾರ್ಥಿಗಳ ಅನಿಸಿಕೆ.
ಹೆಚ್ಚಿನ ಮಾಹಿತಿಗೆ- ಪ್ರಕಾಶ್ ಜೋಯ್ಸ, 9980463013 ಸಂಪರ್ಕಿಸಬಹುದು.
ಮುಂದಿನ ವರ್ಷದಿಂದ ಪರೀಕ್ಷೆ ಕಡ್ಡಾಯ?
ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರನ್ನು ಭೇಟಿ ಮಾಡಿದ ತಂಡ, 5ನೇ ತರಗತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ನವೋದಯ ಪರೀಕ್ಷೆ ತೆಗೆದುಕೊಳ್ಳುವಂತೆ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಮುಂದಿನ ವರ್ಷದಿಂದ 5ನೇ ತರಗತಿ ಮಕ್ಕಳು ಕಡ್ಡಾಯವಾಗಿ ನವೋದಯ ಪರೀಕ್ಷೆ ತೆಗೆದುಕೊಳ್ಳುವ ಸಂಬಂಧ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ.

ನವೋದಯ ಶಾಲೆಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರವೇಶ ಕಡಿಮೆ ಆಗುತ್ತಿತ್ತು. ಹಾಗಾಗಿ ನವೋದಯ ಹಳೇ ವಿದ್ಯಾರ್ಥಿಗಳು ಹಲವರ ಸಹಕಾರದೊಂದಿಗೆ ಉಚಿತ ತರಬೇತಿ ನಡೆಸುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ವೈದ್ಯರು, ಶಿಕ್ಷಕರು, ಪಾಲಕರು ಕೈಜೋಡಿಸಿದ್ದಾರೆ. ಹುಂಚ ಕ್ಷೇತ್ರದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿ, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿ ಕೊಡಲಾಗುತ್ತಿದೆ.ಪ್ರಕಾಶ್ ಜೋಯ್ಸ, ಶಿಬಿರದ ರೂವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net