

ಶೃಂಗೇರಿ: ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿದಾಗ ನಮ್ಮೊಳಗೆ ಹೆಚ್ಚು ಶಕ್ತಿ ಉದ್ಭವಿಸುತ್ತದೆ. ದೇಹದ ಇಷ್ಟ-ಅನಿಷ್ಟಗಳನ್ನು ಅರಿತು ಮನಸ್ಸನ್ನು ನಿರ್ಮಲವಾಗಿರಿಸಿ ಕಾರ್ಯನಿರ್ವಹಿಸಿದರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿಚುಂಚನಗಿರಿ ಸಭಾಭವನದಲ್ಲಿ ಮಂಗಳವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಶಿಕ್ಷಣ, ಆಡಳಿತ ಹಾಗೂ ನಿರ್ವಹಣೆ ಕುರಿತು ರಾಜ್ಯದ ವಿವಿಧೆಡೆಯ ಮುಖ್ಯಶಿಕ್ಷಕರು ಹಾಗೂ ಪ್ರಾಚಾರ್ಯರ ತರಬೇತಿ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಹಜ ರೀತಿಯಲ್ಲಿ ಬದುಕಬೇಕು. ಕೆಲಸವನ್ನು ಪ್ರೀತಿಸಬೇಕು. ಸಹಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯಲ್ಲಿ ಅವಿನಾಭಾವ ಸಂಬಂಧವಿದ್ದರೆ ಅಂಥ ವ್ಯಕ್ತಿತ್ವ ಸಮಾಜಕ್ಕೆ ಶ್ರೇಷ್ಠ ಸಂದೇಶ ನೀಡುತ್ತದೆ. ನಾವು ವರ್ತಮಾನದ ಕ್ಷಣ ಪ್ರೀತಿಸಬೇಕು. ಭೂತಕಾಲದ ಚಿಂತೆಗಳನ್ನು ಹಾಗೂ ಭವಿಷ್ಯತ್ತಿನಲ್ಲಿ ಏನಾಗುವುದೋ ಎಂಬ ಆತಂಕ ಬದಿಗಿಟ್ಟು ಜೀವನ ನಡೆಸಬೇಕು. ಸಮಸ್ಯೆಗಳನ್ನು ಮತ್ತೊಬ್ಬರ ಮೇಲೆ ಹೇರುವವನು ನಾಯಕನಾಗಲು ಸಾಧ್ಯವಿಲ್ಲ. ಬೇರೆಯವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅದಕ್ಕೆ ಪರಿಹಾರ ನೀಡುವವನು ನಿಜವಾದ ನಾಯಕ. ಆವಿಷ್ಕಾರಗಳ ಚಿಂತನೆ ರೂಢಿಸಿಕೊಂಡು ಮತ್ತೊಬ್ಬರಿಗೆ ಜ್ಞಾನ ನೀಡುವತ್ತ ಹೆಚ್ಚಿನ ಗಮನ ನೀಡುವವನ ವ್ಯಕ್ತಿತ್ವವನ್ನು ಸಮಾಜ ಗುರುತಿಸುತ್ತದೆ ಎಂದರು.
ಅವಮಾನ, ಅಪಮಾನಗಳು ಯಾರನ್ನೂ ಬಿಟ್ಟಿಲ್ಲ. ಅಹಂ ಬದಿಗಿಟ್ಟು ಅಂತಃಶಕ್ತಿ ವೃದ್ಧಿಸಿಕೊಂಡರೆ ಮಾತ್ರ ಜೀವನ ಸುಲಲಿತವಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕ ಆತನ ಅಳಲನ್ನು ಬದಿಗಿಟ್ಟು ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ಪ್ರಾಮಾಣಿಕವಾಗಿ ದುಡಿಯಬೇಕು. ಕೆಲಸವನ್ನು ಮೌನದಲ್ಲಿ ನಿರ್ವಹಣೆ ಮಾಡಬೇಕು. ಮೌನಕ್ಕೆ ಅತ್ಯಂತ ಅದ್ಭುತ ಶಕ್ತಿ ಇದೆ. ಅದು ಸಂಸ್ಥೆಯ ಮುಖ್ಯಸ್ಥರು ಪಾಲಿಸಲು ಇರುವ ಯೋಗಮಾರ್ಗಗಳು ಎಂದು ತಿಳಿಸಿದರು.
ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಡಾ. ಧರ್ಮಪಾಲನಂದನಾಥ ಸ್ವಾಮಿ, ಸ್ಥಳೀಯ ಶಾಖಾಮಠದ ಶ್ರೀ ಗುಣನಾಥಸ್ವಾಮೀಜಿ, ಎಂಎಲ್‌ಸಿ ಬೋಜೇಗೌಡ ಟ್ರಸ್ಟ್ ಆಡಳಿತಾಧಿಕಾರಿ ಡಾ. ಎ.ಟಿ.ಶಿವರಾಮ್, ಸಂಪನ್ಮೂಲ ವ್ಯಕ್ತಿಗಳಾದ ಚಕ್ರವರ್ತಿ, ಚರಣ್‌ಕುಮಾರ್, ಡಾ. ಶಿವರಾಮ್ ರೆಡ್ಡಿ, ಬಿಜಿಎಸ್ ಪ್ರಾಚಾರ್ಯ ಡಾ. ಕೆ.ಸಿ.ನಾಗೇಶ್ ಇದ್ದರು.