

ಹುಬ್ಬಳ್ಳಿ: ಶತ್ರುವಿನ ಶತ್ರು ಮಿತ್ರ ಎನ್ನುವ ನೀತಿಯನ್ನು ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಅನುಸರಿಸಿದೆ.
ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ನಾಗರಾಜ ಛಬ್ಬಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ.
ಎಲ್ಲವೂ ಅಂದುಕೊಂಡಂತೇ ಆಗಿ ನಾಗರಾಜ ಛಬ್ಬಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದೇ ಆದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಹೈವೋಲ್ಟೇಜ್ ಕ್ಷೇತ್ರ ಆಗಲಿದೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ನಾಗರಾಜ ಛಬ್ಬಿ ಬಿಜೆಪಿ ಸೇರಿದ್ದಾರೆ.
ಅಂದಹಾಗೆ, ನಾಗರಾಜ ಛಬ್ಬಿಗೆ ಬಿಜೆಪಿ ಸೇರುವ ಆಫರ್ ಈ ಹಿಂದೆಯೇ ಸಿಕ್ಕಿತ್ತು. ಆದರೆ, ಡಿ.ಕೆ. ಶಿವಕುಮಾರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ ಹಿನ್ನೆಲೆಯಲ್ಲಿ ಆಪ್ತರೆನಿಸಿಕೊಂಡಿದ್ದ ನಾಗರಾಜ ಛಬ್ಬಿ ಬಿಜೆಪಿಯ ಆಫರ್ ನಿರಾಕರಿಸಿದರು.
ಇದಾದ ಬಳಿಕ ಮತ್ತೇ ಬಿಜೆಪಿಯಿಂದ ಆಫರ್ ಬಂತು. ಆದರೆ, ಆ ಹೊತ್ತಿಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷರಾಗುವ ಯೋಗ ಬಂತು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಅಧ್ಯಕ್ಷರಿಗೂ ನಾಗರಾಜ ಛಬ್ಬಿ ಅವರು ಪರಮಾಪ್ತ.
ಹೀಗಿದ್ದಾಗ ಮುಂದೆ ಕಲಘಟಗಿಯಿಂದ ಟಿಕೆಟ್ ಸಿಗುವ ವಿಚಾರದಲ್ಲಿ ದಾರಿ ಸುಗಮ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು ಛಬ್ಬಿ. ಇಂಥ ಕಾರಣದಿಂದ ಬಿಜೆಪಿಯ ಆಫರ್ ನಯವಾಗಿ ನಿರಾಕರಿಸಿದರು.
ಟಿಕೆಟ್ ಸಿಗುವಲ್ಲಿ ಮೋಸವಾಗದು ಎಂದು ನಾಗರಾಜ ಛಬ್ಬಿ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರ ಪ್ರದಕ್ಷಿಣೆ ಹಾಕಿದರು. ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿದರು. ಸಾಲದ್ದಕ್ಕೆ ಮನೆಮನೆಗೂ ಕುಕ್ಕರ್ ಕೊಟ್ಟು ಸದ್ದು ಮಾಡಿದರು.
ಇನ್ನೇನು ಟಿಕೆಟ್ ಸಿಕ್ಕೇ ಬಿಡುತ್ತದೆ ಎನ್ನುವ ಖಾತರಿಯಲ್ಲಿದ್ದ ಛಬ್ಬಿ ಅವರಿಗೆ ಕಾಂಗ್ರೆಸ್ ಕೈಕೊಟ್ಟಿದೆ. ಸಂತೋಷ ಲಾಡ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಹಾಲಿ ಶಾಸಕರನ್ನು ಬಿಟ್ಟು ಯುವಕರಿಗೆ ಅಥವಾ ಹೊಸಬರಿಗೆ ಟಿಕೆಟ್ ನೀಡಬೇಕು ಎನ್ನುವ ಅಭಿಪ್ರಾಯ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೆಮುಂದೆ ನೋಡದೆ ಛಬ್ಬಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಂತೆ ಕಾಣುತ್ತದೆ.
ಹಾಗಂತ, ಬಿಜೆಪಿ ಟಿಕೆಟ್ ಪಟ್ಟಿಯಲ್ಲಿ ನಾಗರಾಜ ಛಬ್ಬಿ ಅವರ ಹೆಸರು ಬಂದೇ ಬಿಡುತ್ತದೆ ಎಂದು ಈಗ ಹೇಳಲಾಗದು.
ಒಂದು ವೇಳೆ ಬಂದರೂ ಅಥವಾ ಬರದೆ ಹೋದರೂ ಛಬ್ಬಿ ಅವರ ಸೇರ್ಪಡೆ ಬಿಜೆಪಿಗೆ ಬಲ ನೀಡಿದ್ದು ಮಾತ್ರ ಸತ್ಯ. ಲಾಡ್ ಸರಿಸಮನಾಗಿ ಛಬ್ಬಿ ಸಂಘಟನೆ ಮಾಡಿರುವುದರಿಂದ ಅದರ ಲಾಭ ಬಿಜೆಪಿ ಪಡೆಯಲಿದೆ.
ನಾಗರಾಜ ಛಬ್ಬಿ ಅವರಿಗೆ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಬಿಗ್ ಫೈಟ್ ಕ್ಷೇತ್ರದಲ್ಲಿ ನಡೆಯಲಿದೆ. ಭಾವನಾತ್ಮಕ ಮತದಾರರಿರುವ ಕ್ಷೇತ್ರ ಕಲಘಟಗಿ. ಹಾಗಂತ ಸ್ಥಳೀಯ ನಾಯಕತ್ವದ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ.
ಈ ಕಾರಣಕ್ಕಾಗಿಯೇ ಹೊರಗಿನವರೇ ಇಲ್ಲಿ ಶಾಸಕರಾಗಿದ್ದು ಹೆಚ್ಚು. ಕಳೆದ ಚುನಾವಣೆಯಲ್ಲಿ ಒಳ-ಹೊರಗಣ ಚರ್ಚೆ ಮುನ್ನೆಲೆಗೆ ಬಂದು ಜನರು ಈ ವಿಷಯ ಭಾವನಾತ್ಮಕವಾಗಿ ಸ್ವೀಕರಿಸಿದ್ದರಿಂದ ಸಿ.ಎಂ. ನಿಂಬಣ್ಣವರ ಅವರನ್ನು ಶಾಸಕರನ್ನಾಗಿಸಿದ್ದರು.
ಈ ತರನಾದ ಸಂಗತಿಗಳಿಂದ ರಾಜಕೀಯವಾಗಿ ಕಲಘಟಗಿ ಕ್ಷೇತ್ರವನ್ನು ಹೀಗೆಯೇ ಎಂದು ನಿಖರವಾಗಿ ಲೆಕ್ಕಿಸಲಾಗದು.