

ಸಿಂಧನೂರು: ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರಗೆ ಮನವಿ ಸಲ್ಲಿಸಲಾಯಿತು.
ನಗರದ ಪ್ರಮುಖ ರಸ್ತೆಗಳ ಬದಿ ದಶಕಗಳಿಗೂ ಮೇಲ್ಪಟ್ಟು ಸಾವಿರಾರು ವ್ಯಾಪಾರಸ್ಥರು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ. ಅನೇಕರು ನಗರಸಭೆಯಿಂದ ವ್ಯಾಪಾರಿ ಪರವಾನಗಿ ಪಡೆದಿದ್ದಾರೆ. ಈ ವ್ಯಾಪಾರಿಗಳ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವುದರಿಂದ ಅವರ ಕುಟುಂಬಗಳು ಬೀದಿಗೆ ಬರಲಿವೆ ಎಂದು ದೂರಲಾಯಿತು.
ಬೀದಿಬದಿ ವ್ಯಾಪಾರ ನಂಬಿಕೊಂಡು ಹಲವರು ಬ್ಯಾಂಕ್ ಸೇರಿದಂತೆ ಇತರೆಡೆ ಸಾಲ ಮಾಡಿಕೊಂಡಿದ್ದು, ಅಂಗಡಿಗಳನ್ನು ತೆರವು ಮಾಡಿದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಬಾಷಾಸಾಬ್, ರಾಜಾಸಾಬ್, ಬಸವರಾಜ ಟೇಲರ್, ಶಂಕ್ರಪ್ಪ ಭೋವಿ, ಪ್ರಮುಖರಾದ ಶರಣಪ್ಪ ಮಲ್ಲಾಪುರ, ಸೈಯದ್ ಬಾಷಾ ಮಿಟ್ಟಿಮನಿ ಇದ್ದರು.