ಚಿಕ್ಕಬಳ್ಳಾಪುರ: ರಾತ್ರಿ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರಿಗಳು ಮಚ್ಚು ಹಾಗೂ ಚಾಕುಗಳೊಂದಿಗೆ ಬೀದಿಕಾಳಗ ಮಾಡಿಕೊಂಡಿದ್ದು, ಗೌರಿಬಿದನೂರು ನಗರದಲ್ಲಿ ಆತಂಕ ಸೃಷ್ಟಿಸಿತ್ತು.
ಅಲಿಪುರ ಗ್ರಾಮದ ರಬತ್ ಅಲಿ, ಆಲಿರಾಜಾ ನಗರದ ಬಸ್ ನಿಲ್ದಾಣ ಸಮೀಪ ತರಕಾರಿ ಮಾರುತ್ತಿದ್ದರು. ಆದರೆ ಅಧಿಕ ಶಬ್ದದ ಮೈಕ್ ಬಳಸಿ ತರಕಾರಿ ಮಾರುತ್ತಿದ್ದದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸರು ಕೂಡ ಹಲವು ಬಾರಿ ಪ್ರಶ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ರಾತ್ರಿ ಇದೇ ವಿಚಾರವಾಗಿ ರೌಡಿ ಶೀಟರ್ ಮಹಮ್ಮದ್ ರಫಿಕ್ ಆಲಿಯಾಸ್ ಡ್ಯಾನಿಷ್ ತರಕಾರಿ ವ್ಯಾಪಾರಿಗಳಿಗೆ ಶಬ್ದವನ್ನು ಕಡಿಮೆ ಮಾಡಿ ವ್ಯಾಪಾರ ಮಾಡುವಂತೆ ಸೂಚಿಸಿದ್ದಾರೆ.
ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ರಬತ್ ಅಲಿ, ಆಲಿರಾಜಾ, ಡ್ಯಾನಿಷ್ ಹಾಗೂ ಮಿಟ್ಟೇನಹಳ್ಳಿಯ ನಹೀಮ್ ಖಾನ್ ನಡುವೆ ಗಲಾಟೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಮಚ್ಚು ಮತ್ತು ಚಾಕುಗಳನ್ನು ಹಿಡಿದು ಪರಸ್ಪರ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಡ್ಯಾನಿಷ್ ತಮ್ಮ ನಹೀಮ್ ಖಾನ್ ಗೆ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ರೌಡಿಶೀಟರ್ ಡ್ಯಾನಿಷ್ ನೀಡಿದ ದೂರಿನ ಮೇರೆಗೆ ನಗರಠಾಣೆ ಪೊಲೀಸರು ರಬತ್ ಅಲಿ ಹಾಗೂ ಆಲಿರಾಜಾರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
*ಸಾರ್ವಜನಿಕರ ಆಗ್ರಹ*
ಬೀದಿಕಾಳಗ ಘಟನೆ ಸಾರ್ವಜನಿಕರಲ್ಲಿ ಸಾಕಷ್ಟು ಭಯ ಮೂಡಿಸಿದ್ದು, ಸ್ಥಳೀಯರು ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಗೌರಿಬಿದನೂರು ನಗರದಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದು, ಪೊಲೀಸರು ಗಮನಹರಿಸಬೇಕು. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.