ಬೀದಿನಾಯಿಗಳ ಹಾವಳಿಗೆ ಜನ ಹೈರಾಣ, ಆತಂಕದ ವಾತಾವರಣ ನಿರ್ಮಾಣ

21CBPDOGS
Published on

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬೀದಿ ನಾಯಿಗಳ ಹಾವಳಿಗೆ ಜನರು ಹೈರಾಣರಾಗಿದ್ದು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ವಿಫಲವಾಗಿವೆ.

ಹೌದು! ರಸ್ತೆಗಳಿಗೆ ದಿಢೀರನೇ ನುಗ್ಗುವುದರಿಂದ ಅಪಘಾತಗಳು ಸಂಭವಿಸುವಿಕೆ, ನಿರಂತರ ಬೊಗಳುವಿಕೆ ಶಬ್ದ, ಜನರ ಮೇಲೆ ದಾಳಿ ಸೇರಿದಂತೆ ನಾನಾ ಪ್ರಕರಣಗಳು ವರದಿಯಾಗುತ್ತಿವೆ. ಗಲ್ಲಿ ಗಲ್ಲಿಯೂ ನಾಯಿಗಳ ಸಂಖ್ಯೆ ಏರಿಕೆಯಾಗಿದ್ದು ರಸ್ತೆಯ ಒಂದೆಡೆ ಕನಿಷ್ಠ 5 ರಿಂದ 8 ನಾಯಿಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಜನರು ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ.

* ವರ್ಷಕ್ಕೆ 8 ಸಾವಿರ ಪ್ರಕರಣ

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಸರಾಸರಿ ಲೆಕ್ಕದಲ್ಲಿ ವರ್ಷಕ್ಕೆ ಕನಿಷ್ಠ 8 ಸಾವಿರ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಚಿಂತಾಮಣಿ, ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಗುವಿನ ಮೇಲೆ ದಾಳಿ ನಡೆಸಿ, ಗಂಭೀರ ಸ್ವರೂಪದ ಗಾಯಗಳಾಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಯಾವುದೇ ಗಲ್ಲಿಯಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಆಟವಾಡಲು ಪಾಲಕರು ಬಿಡುತ್ತಿಲ್ಲ. ಇದಕ್ಕೆ ನಾಯಿಗಳ ಹಾವಳಿ ಪ್ರಮುಖ ಕಾರಣ. ಯಾವುದೇ ತಿಂಡಿ ತಿನಿಸು ಸೇರಿದಂತೆ ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದಾರಿಹೋಕರು ಕಾಣುತ್ತಿದ್ದಂತೆ ಹಿಂಡು ಹಿಂಡಾಗಿ ಬಂದು ನಾಯಿಗಳು ದಾಳಿ ನಡೆಸುತ್ತಿವೆ.

* ಅಪಘಾತ ಪ್ರಕರಣಗಳು

ಕಳೆದ ಜು.18 ರಂದು ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯ ಕ್ಲಿನಿಕ್ ಮುಂಭಾಗ ನಾಯಿಗಳು ದಿಢೀರನೇ ಅಡ್ಡ ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಾದು ಹೋಗುತ್ತಿದ್ದ ಸವಾರ ಮತ್ತು ಮಹಿಳೆ ಕೆಳಕ್ಕೆ ಬಿದ್ದಿದ್ದು ಒಬ್ಬರಿಗೆ ಕಾಲು ಮುರಿದಿದೆ. ಕಳೆದ ಒಂದು ವಾರದ ಹಿಂದೆ ಹಳೇ ಜಿಲ್ಲಾಸ್ಪತ್ರೆಯ ಮಾರ್ಗದ ಪಿಪಿಎಚ್ ಶಾಲೆಯ ಮುಂಭಾಗ ನಾಯಿಗಳ ದಾಳಿಯನ್ನು ತಪ್ಪಿಸಿಕೊಳ್ಳಲು ಹೋಗಿ, ದ್ವಿಚಕ್ರ ವಾಹನ ಸವಾರನು ಚರಂಡಿಗೆ ಬಿದ್ದು ಗಾಯಗೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತೀಚೆಗೆ ನಾಯನಹಳ್ಳಿ ಮಾರ್ಗದ ರಸ್ತೆಯಲ್ಲಿ ಅಟ್ಟಿಸಿಕೊಂಡು ಬಂದ ನಾಯಿಗಳಿಂದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಜಖಂಗೊಂಡಿದೆ. ಇಂತಹ ಪ್ರಕರಣಗಳು ನಿರಂತರವಾಗಿ ಜಿಲ್ಲೆಯಲ್ಲಿ ವರದಿಯಾಗುತ್ತಿವೆ.

* ಸ್ಥಳೀಯ ಆಡಳಿತದ ನಿರ್ಲಕ್ಷ್ಯ

ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನೆರವೇರಿಸುವಿಕೆ, ರೇಬೀಸ್ ಚುಚ್ಚು ಮದ್ದು ಹಾಕಿಸುವಿಕೆ ಸೇರಿದಂತೆ ಪರಿಹಾರ ಚಟುವಟಿಕೆಯಲ್ಲಿ ನಿರ್ಲಕ್ಷ್ಯ ಕಂಡು ಬರುತ್ತಿದೆ.

ಇನ್ನು ಹುಚ್ಚು ಹಿಡಿದು ಜೊಳ್ಳು ಸುರಿಸುವ, ಇತರೆ ರೋಗಪೀಡಿತ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ರೇಬೀಸ್ ಚುಚ್ಚು ಮದ್ದು ನೀಡುವಿಕೆ ಪ್ರಗತಿಯಲ್ಲೂ ಹಿನ್ನಡೆ ಅನುಭವಿಸಿದ್ದು ಕೇವಲ ಮನೆಯಲ್ಲಿ ಸಾಕುವ ಮಾಲೀಕರು ಮಾತ್ರ ನಾಯಿಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಸಂತಾನಶಕ್ತಿ ಹರಣ ಶಸöಚಿಕಿತ್ಸೆಯ ಟೆಂಡರ್‌ಗೆ ಸ್ಪಂದನೆ ಇಲ್ಲ. ಮತ್ತೊಂದೆಡೆ ಇದಕ್ಕಾಗಿ ಬಜೆಟ್‌ನಲ್ಲಿ ಮೀಸಲಿಟ್ಟ 10 ಲಕ್ಷ ರೂ ಹಾಗೆಯೇ ಉಳಿದಿದೆ. ಕಳೆದ ವರ್ಷ ಚಿಂತಾಮಣಿ ನಗರಸಭೆ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಂಡಿದ್ದು ಉಳಿದಂತೆ ಇತರೆ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ನಾಯಿ ಹಾವಳಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net