

ಬೆಂಗಳೂರು: ನಗರದಲ್ಲಿ ಕರೊನಾ, ಕಾಲರಾ ಹಾಗೂ ಹಕ್ಕಿ ಮತ್ತು ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಆವರಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೀದಿಬದಿ ವ್ಯಾಪಾರವನ್ನು ನಿರ್ಬಂಧಿಸಿದ್ದಾರೆ. ಆದರೆ, ರಾಜಧಾನಿಯಲ್ಲಿ ಈ ನಿರ್ಬಂಧ ಪಾಲನೆಯಾಗುತ್ತಿಲ್ಲ. ಬೀದಿಬದಿ ವ್ಯಾಪಾರಿಗಳು ಎಂದಿನಂತೆ ತಮ್ಮ ವಹಿವಾಟು ಮುಂದುವರಿಸಿದ್ದಾರೆ.
ಕೆಮ್ಮು, ಸೀನು, ತಲೆನೋವು, ಜ್ವರ ಕರೊನಾ ಮತ್ತು ಹಂದಿ ಜ್ವರದ ಲಕ್ಷಗಳಾಗಿವೆ. ವಾಂತಿ, ಭೇದಿ ಕಾಲರಾ ಮತ್ತು ಕರುಳುಬೇನೆಯ ಲಕ್ಷಣವಾಗಿದೆ. ಈ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟಲು ಬೀದಿಬದಿ ವ್ಯಾಪಾರ ನಿರ್ಬಂಧಿಸಿ ಪಾಲಿಕೆ ಸೋಮವಾರ ಆದೇಶ ಹೊರಡಿಸಿತ್ತು. ಈ ಬಗ್ಗೆ ಜಾಗೃತಿ ಇಲ್ಲದಿರುವುದರಿಂದ ಬೀದಿಬದಿ ವ್ಯಾಪಾರಿಗಳ ವಹಿವಾಟು ಎಂದಿನಂತೆ ಮುಂದುವರಿದಿದೆ.
ಎಚ್1ಎನ್1ನಿಂದ ಒಂದು ಸಾವು: ನಗರದಲ್ಲಿ ಕರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಈವರೆಗೆ ಬೆಂಗಳೂರು ನಗರದಲ್ಲಿ 155 ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 7 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಯಾರಲ್ಲೂ ಕಾಲರಾ ಸೋಂಕು ಇಲ್ಲ: ಮಾ.1ರಿಂದ ಇದುವರೆಗೆ ಕರುಳುಬೇನೆ (ಗ್ಯಾಸ್ಟ್ರಾ ಎಂಟರೈಟಿಸ್) ರೋಗದಿಂದ 105 ಜನರು ಐಸೋಲೇಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 17 ಜನರಿಗೆ ಕಾಲರಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಇವರಲ್ಲಿ ಯಾರಲ್ಲೂ ಕಾಲರಾ ಸೋಂಕು ದೃಢಪಡದ ಕಾರಣ, 3 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸೋಮವಾರ 7 ಜನ ಬಿಡುಗಡೆಯಾಗಿದ್ದರೆ, ಮಂಗಳವಾರ ಉಳಿದ 10 ಜನರನ್ನು ಬಿಡುಗಡೆ ಮಾಡಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಎಂದಿನಂತೆ ಸಾಗಿದ ಬೀದಿಬದಿ ವಹಿವಾಟು
ನಗರದ ಕೆ.ಆರ್. ಮಾರುಕಟ್ಟೆ, ಎಸ್.ಪಿ. ರಸ್ತೆ, ಮಲ್ಲೇಶ್ವರ ರಸ್ತೆ, ರಸೆಲ್ ಮಾರುಕಟ್ಟೆ, ಬನಶಂಕರಿ, ವಿಜಯನಗರ, ಬಸವನಗುಡಿ, ಗೋರಿಪಾಳ್ಯ, ಶಿವಾಜಿನಗರ ಸೇರಿ ಎಲ್ಲ ಭಾಗಗಳಲ್ಲೂ ಬೀದಿಬದಿ ವ್ಯಾಪಾರ ಅವ್ಯಾಹತವಾಗಿ ಮುಂದುವರಿದಿದೆ. ತೆರೆದ ವಾಹನಗಳಲ್ಲಿ ಊಟ, ತಿಂಡಿ, ಕತ್ತರಿಸಿದ ಹಣ್ಣುಗಳು, ತಂಪು ಮತ್ತು ಬಣ್ಣದ ಪೇಯಗಳು, ಸೌತೆಕಾಯಿ, ಟೀ-ಕಾಫಿ, ಬೋಂಡ ಬಜ್ಜಿ ಸೇರಿ ಕರಿದ ಪದಾರ್ಥಗಳ ಮಾರಾಟ ಎಂದಿನಂತೆ ಸಾಗಿದೆ.
ಆಯುಕ್ತರ ಆದೇಶದ ಮೇರೆಗೆ 300ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಪುನಃ ಮಾರಾಟಕ್ಕೆ ಬಂದರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗುವುದು. ಜತೆಗೆ ಕುಡಿಯುವ ನೀರಿನ ಸ್ವಚ್ಛತೆಯಲ್ಲಿ ಕ್ಲೋರಿನ್ ಬಳಕೆಯ ಪ್ರಮಾಣ ಹೆಚ್ಚಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. | ಬಾಲಸುಂದರ್ ಬಿಬಿಎಂಪಿ ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಬೀದಿಬದಿ ವ್ಯಾಪಾರ ನಿರ್ಬಂಧಿಸಿರುವ ಪಾಲಿಕೆಯ ಕ್ರಮವನ್ನು ವ್ಯಾಪಾರಿಗಳ ಸಂಘಟನೆ ಖಂಡಿಸುತ್ತದೆ. ಸ್ವಚ್ಛತೆಯಿಂದ ವ್ಯಾಪಾರ ಮಾಡುವ ಕುರಿತು ತರಬೇತಿ ಪಡೆದು ಸರ್ಕಾರದಿಂದ ಪ್ರಮಾಣಪತ್ರ ಪಡೆದಿದ್ದೇವೆ. ಈಗ ವ್ಯಾಪಾರ ನಿರ್ಬಂಧಿಸಿದರೆ ಜೀವನಕ್ಕೆ ತೊಂದರೆಯಾಗುತ್ತದೆ. | ರಂಗಸ್ವಾಮಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ https://www.vijayavani.net/corona-bird-flu-fear-thousands-of-chickens-killed/