

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಪಟ್ಟಣದಲ್ಲಿ ಇಟ್ಟುಕೊಂಡ ಗೂಡಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಅದನ್ನೆ ನಂಬಿ ಜೀವನ ನಡೆಸುತ್ತಿವವರಿಗೆ ಪ.ಪಂ. ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಪಟ್ಟಣದ ಬೀದಿ ವ್ಯಾಪಾರಿಗಳ ಸಂಘದ ವತಿಯಿಂದ ತಹಸೀಲ್ದಾರ್ಗೆ ಬುಧವಾರ ಮನವಿ ಸಲ್ಲಿಸಲಾಯಿತು.
ವಕೀಲ ವಿಕ್ರಮ ನಾಯ್ಕ ಮಾತನಾಡಿ, ಪ.ಪಂ. 50 ರೂ. ಶುಲ್ಕ ವಸೂಲಿ ಮಾಡಿದ ಮೇಲೆ ಅವರಿಗೆ ಜವಾಬ್ದಾರಿ ಇದೆ. ಬೀದಿ ವ್ಯಾಪಾರಸ್ಥರು ಅದನ್ನೆ ನಂಬಿದ್ದಾರೆ. ಪ.ಪಂ. ವ್ಯಾಪ್ತಿಯಲ್ಲಿ ಜಾಗ ಇದೆ. ಅಲ್ಲಿ ಅವಕಾಶ ಮಾಡಿಕೊಟ್ಟು ಜೀವನಕ್ಕೆ ದಾರಿ ಮಾಡಿಕೊಡಬೇಕು. ಎಲ್ಲ ಕಡೆ ಬೀದಿ ಬದಿ ವ್ಯಾಪಾರಸ್ಥರಿಗೆ ಫುಡ್ ಕೋರ್ಟ್ ಮಾಡಿಕೊಟ್ಟಿದ್ದಾರೆ. ಇಲ್ಲಿಯೂ ಜಾಗ ಇದೆ. ಪ.ಪಂ.ಕ್ಕೂ ಆದಾಯ ಬರುತ್ತದೆ. ಶೀಘ್ರದಲ್ಲಿ ಪ.ಪಂ. ಸಭೆಯಲ್ಲಿ ಠರಾವು ಮಾಡಿ ಫುಡ್ ಕೋರ್ಟ್ ಮಾಡಲು ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೀದಿ ವ್ಯಾಪಾರಸ್ಥರ ಸಂಘದ ಪ್ರಮುಖ ಶ್ರೀರಾಮ ಜಾದೂಗಾರ ಮಾತನಾಡಿ, ಪ.ಪಂ. ಬೆಳಗ್ಗೆ ಸುಂಕ ವಸೂಲಿ, ಸಂಜೆ ಅಂಗಡಿ ತೆರವು ಮಾಡುತ್ತಿದ್ದಾರೆ. ವಸೂಲಿ ಮಾಡಿದ ಮೇಲೆ ಅವರಿಗೆ ಸೂಕ್ತವಾದ ಅವಕಾಶ ಮಾಡಿಕೊಡುವುದು ಪಪಂ ಜವಾಬ್ದಾರಿ. ತರಕಾರಿ, ಮೀನು, ಹೂವು, ಫುಡ್ಗೆ ಪ್ರತ್ಯೇಕ ಮಾರುಕಟ್ಟೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬೀದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ, ಬೀದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ತೆರವುಗೊಳಿಸಿದ್ದಾರೆ. ಪ.ಪಂ.ಗೆ ಜವಾಬ್ದಾರಿ ಇದೆ. ಹಣ ವಸೂಲಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಶಿರಸ್ತೇದಾರ ಕೃಷ್ಣ ಗೊಂಡ ಮನವಿ ಸ್ವೀಕರಿಸಿದರು. ಸಂಘದ ಅಶೋಕ ಜಾದೂಗಾರ ಮತ್ತು ಬೀದಿ ವ್ಯಾಪಾರಸ್ಥರು ಇದ್ದರು.