

ಲಕ್ಷ್ಮೇಶ್ವರ: ಪಟ್ಟಣದ ಪ್ರಮುಖ ಬಜಾರ ರಸ್ತೆ ಚಾವಡಿಯಿಂದ ಭರಮದೇವರ ಸರ್ಕಲ್ ವರೆಗಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಬೀದಿಬದಿಯ ವ್ಯಾಪಾರಸ್ಥರು ಶುಕ್ರವಾರ ಪುರಸಭೆ ಕಚೇರಿಗೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರಸ್ಥ ರವಿ ಪುರಾಣಿಕಮಠ ಮಾತನಾಡಿ, ಪುರಸಭೆಯ 15ನೇ ಹಣಕಾಸಿನ 76 ಲಕ್ಷ ರೂ. ಅನುದಾನದಲ್ಲಿ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್ ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ(ಸಿಸಿ) ಕಾಮಗಾರಿಯನ್ನು 3 ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿದೆ. ರಸ್ತೆ ಅಗೆದು ಹಾಗೆಯೇ ಬಿಡಲಾಗಿತ್ತು. ಈಗ ರಸ್ತೆ ಮಧ್ಯದಲ್ಲಿನ ರಾಜಕಾಲುವೆ ಕುಸಿದು ವಾಹನ ಸಂಚಾರ ಬಂದ್ ಆಗಿದೆ. ಈ ಮಾರ್ಗವಾಗಿ ದರ್ಗಾ, ಕೋರ್ಟ್, ತಹಸೀಲ್ದಾರ್ ಕಚೇರಿ, ಶಾಲೆ ಸೇರಿ ನಿತ್ಯ ಕಾರ್ಯಕ್ಕೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ. ರೈತರು, ವ್ಯಾಪಾರಸ್ಥರು, ಜನಸಾಮಾನ್ಯರು, ಶಾಲಾ ಮಕ್ಕಳು, ರೋಗಿಗಳು, ವೃದ್ಧರು, ಆಟೋ ಚಾಲಕರ ಪರಿಸ್ಥಿತಿ ಹೇಳತೀರದಾಗಿದೆ ಎಂದು ಹೇಳಿದರು. ಮಳೆಗಾಲದಲ್ಲಿ ಜನರು ನರಕಯಾತನೆ ಅನುಭವಿಸುತ್ತಾ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಾಮಗಾರಿಯ ನಿಧಾನಗತಿ ಮತ್ತು ಗುಣಮಟ್ಟದ ಕಾಮಗಾರಿಗಾಗಿ ಹೋರಾಟ ನಡೆದರೂ ಯಾವುದೇ ಪ್ರಯೋಜವಾಗಿಲ್ಲ. ಶುಕ್ರವಾರದ ಸಂತೆಯ ದಿನವಂತೂ ಹೊರಗಿನಿಂದ ಬರುವ ಬೀದಿಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಅಂಗಡಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಉಳಿದ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ. ಬೇಗ ರಸ್ತೆ ಕೆಲಸ ಮುಗಿಸಬೇಕು, ಇಲ್ಲದಿದ್ದರೆ ಬಜಾರದಲ್ಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.