ಪ್ರತಿ ವಾರ್ಡ್‌ಗಳಲ್ಲಿ ವ್ಯಾಪಾರ ವಲಯ ನಿರ್ಮಾಣ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟಿಸಿ ಮೇಯರ್ ಭರವಸೆ

mng-jan10-bedibadhi
Published on

ಮಂಗಳೂರು : ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ನಗರದ ಹೃದಯ ಭಾಗದಲ್ಲಿ ಬೃಹತ್ ಬೀದಿ ವ್ಯಾಪಾರ ವಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.


ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಬುಧವಾರ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.


ನಗರದ ಎಲ್ಲಾ 60ವಾರ್ಡ್ ಗಳಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರತಿ ವಾರ್ಡ್ ಗಳಲ್ಲಿ ನಗರ ಪಾಲಿಕೆ ವ್ಯಾಪಾರ ವಲಯ ನಿರ್ಮಿಸಿ ಕೊಡಲಿದೆ. ಬೀದಿಬದಿ ವ್ಯಾಪಾರಿಗಳು ಸಹಕಾರ ಸಂಘ ರಚಿಸಿರುವುದು ವ್ಯಾಪಾರಿಗಳನ್ನು ಪ್ರಗತಿಶೀಲರನ್ನಾಗಿ ಮಾಡಲು ಅನುಕೂಲ ಆಗಲಿದೆ ಎಂದರು.
ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಸಹಕಾರ ಸಂಘದ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಿಸಿ ಬೀದಿಬದಿ ವ್ಯಾಪಾರಿಗಳ ಸಹಕಾರ ಸಂಘ ಮಾಡಿರುವುದು ಒಂದು ಐತಿಹಾಸಿಕ ಹೆಜ್ಜೆ ಎಂದು ಶ್ಲಾಘಸಿದ ಅವರು ನಗರದ ಅಭಿವೃದ್ಧಿಗೆ ಬೀದಿ ವ್ಯಾಪಾರಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು.


ಮುಖ್ಯ ಅತಿಥಿಯಾಗಿದ್ದ ಪದ್ಮಶ್ರೀ ಹಾಜಬ್ಬ ಹರೇಕಳ, ನಾನು ಸ್ವತಃ ಬೀದಿ ವ್ಯಾಪಾರಿಯಾಗಿ ಅವರ ಹೊಟ್ಟೆಪಾಡಿನ ಕಷ್ಟಗಳು ನನಗೆ ಚೆನ್ನಾಗಿ ತಿಳಿದಿದೆ ನಾನು ಇಂದು ಪ್ರಧಾನಿ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿರಬಹುದು. ಆದರೆ ನನ್ನ ಕಷ್ಟದ ದಿನಗಳ ಬಗ್ಗೆ ಇನ್ನು ನೆನಪಿದೆ ಎಂದ ಅವರು ಬೀದಿವ್ಯಾಪಾರಿಗಳು ಸ್ವಾಭಿಮಾನವನ್ನು ಎಂದೂ ಬಿಟ್ಟು ಕೊಡುವವರಲ್ಲ ಎಂದರು.


ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಭಗವತಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಬಿ.ಎಂ. ಮಾಧವ, ಪರಿವರ್ತನ ಗ್ರಾಮೀಣ ಸೊಸೈಟಿಯ ನಿರ್ದೇಶಕ ಡಿ ಕೃಷ್ಣಾನಂದ, ಚಿಂತಕಿ ಡಾ. ರೀಟಾ ನೋರೋನ್ಹ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಸಾಮರಸ್ಯ ಮಂಗಳೂರಿನ ಅಧ್ಯಕ್ಷೆ ಮಂಜುಳಾ ನಾಯಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್,ಸಂಘದ ಉಪಾಧ್ಯಕ್ಷ ಹರೀಶ್ ಪೂಜಾರಿ ಶುಭ ಹಾರೈಸಿ ಮಾತನಾಡಿದರು.


ಸಿಐಟಿಯು ಅಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಬಿಕೆ ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ನಿರ್ದೇಶಕರಾದ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೇಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net