

ಜಮಖಂಡಿ: ಬೀದಿ ಬದಿ ವ್ಯಾಪಾರಸ್ಥರ 2025-26ನೇ ಸಾಲಿನ ಪುಟ್ಪಾತ್ ನೆಲಬಾಡಿಗೆ ಬಹಿರಂಗ ಹರಾಜಿನಲ್ಲಿ 16.65 ಲಕ್ಷ ರೂ. ಮೊತ್ತಕ್ಕೆ ಹರಾಜಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ನಗರಸಭೆ ತನ್ನ ಆದಾಯ ಹೆಚ್ಚಿಸಿಕೊಂಡಿದೆ.
ಪಟ್ಟಣದ ನಗರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಹಾರಾಜು ಪ್ರಕ್ರಿಯೆಯಲ್ಲಿ 10 ಲಕ್ಷ ಮೊತ್ತದ ಡಿಡಿ ತುಂಬಿ 8 ಜನ ಭಾಗವಹಿಸಿದ್ದರು. ಪೈಪೋಟಿಯೊಂದಿಗೆ ಹರಾಜು ಪ್ರಕ್ರಿಯೆ ಏರಿಕೆ ಕಂಡು ಅಂತಿಮವಾಗಿ ಮುತ್ತಪ್ಪ ಭಜಂತ್ರಿ 16.65 ಲಕ್ಷ ರೂ. ಮೊತ್ತಕ್ಕೆ ಬಿಡ್ ಪಡೆದುಕೊಂಡು 2025-26ನೇ ಸಾಲಿನ ಸಂತೆ ಕರ ವಸೂಲಾತಿಯನ್ನು ತಮ್ಮದಾಗಿಸಿಕೊಂಡರು.
ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಬಿಡ್ ಮೊತ್ತ ಹೆಚ್ಚಾಗಿದೆ. ಈ ಬಾರಿ ಸಂತೆ ಕರದ ದರವನ್ನು ಹೆಚ್ಚಿಸಲಾಗಿದೆ. ವ್ಯಾಪಾರಸ್ಥರಿಂದ ಹೆಚ್ಚಿಗೆ ಹಣ ಪಡೆಯುವುದಾಗಲಿ, ತೊಂದರೆ ನೀಡುವುದಾಗಲಿ ಮಾಡಬಾರದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ದಾನೇಶ ಘಾಟಗೆ, ಸದಸ್ಯರಾದ ದಿಲಾವರ ಶಿರೋಳ, ಕಿರಣ ಪಿಸಾಳ, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಬಾಬುರಾವ ಕಮತಗಿ, ಸೋಮು ದೇವರಮನಿ ಮತ್ತಿತರರಿದ್ದರು.