ಬೀದಿಬದಿ ವ್ಯಾಪಾರಕ್ಕೆ ಶಾಶ್ವತ ಪರಿಹಾರ ನೀಡಿ

Published on

ಸಿಂಧನೂರು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಸೋಮವಾರ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ಭೇಟಿಯಾಗಿ ಒತ್ತಾಯಿಸಿತು.

ಕಳೆದ ಡಿಸೆಂಬರ್‌ನಿಂದ ಬೀದಿಬದಿ ವ್ಯಾಪಾರಸ್ಥರು ಬೀದಿಗೆ ಬಿದ್ದಿದ್ದಾರೆ. ತರಕಾರಿ, ಹಣ್ಣು, ಹೋಟೆಲ್, ಚಹಾ ಅಂಗಡಿ, ಬಟ್ಟೆ ಅಂಗಡಿ, ರೆಗ್ಜಿನ್ ವರ್ಕ್ಸ್, ಇಡ್ಲಿ ಬಂಡಿ, ಹೂವಿನ ಅಂಗಡಿ, ಪಂಚರ್ ಶಾಪ್, ಕರಕುಶಲ ಅಂಗಡಿ ಸೇರಿ ಸಣ್ಣಪುಟ್ಟ ವಿವಿಧ ಬಗೆಯ ಡಬ್ಬಾ ಅಂಗಡಿ ವ್ಯಾಪಾರಿಗಳು ಜೀವನ ನಿರ್ವಹಣೆಗೆ ಆದಾಯವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ.

ರಸ್ತೆ ಬಿಟ್ಟು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಲ್ಲಲ್ಲಿ ಹಾಗೂ ಉಪದಾರಿಗಳಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದರೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ತಳ್ಳು ಬಂಡಿಗಳ ವ್ಯಾಪಾರಸ್ಥರ ಮೇಲೆ ನಿರಂತರ ಕಿರುಕುಳ ಮುಂದುವರಿದಿದ್ದು, ತಪ್ಪಿಸಬೇಕು.

ರಸ್ತೆ ಸುರಕ್ಷತಾ ನಿಯಮಗಳನ್ವಯ, ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ, 2014ರಂತೆ ತಳ್ಳುಬಂಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಸೂಕ್ತ ಸ್ಥಳ ಗುರುತಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮುನ್ನ ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘದ ಸಂಚಾಲಕ ಡಿ.ಎಚ್.ಪೂಜಾರ್ ಹಾಗೂ ಚಂದ್ರಶೇಖರ ಗೊರೇಬಾಳ , ಮುಖಂಡರಾದ ದೇವೇಂದ್ರಗೌಡ, ಹುಸೇನ್ ಸಾಬ್, ಬಸವರಾಜ ಬಾದರ್ಲಿ, ಬಸವಂತರಾಯಗೌಡ ಪಾಟೀಲ್, ಡಾ.ವಸೀಂ, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ಎಂ.ಗೋಪಾಲಕೃಷ್ಣ, ರಮೇಶ್ ಪಾಟೀಲ್ ಬೇರಿಗಿ, ಅಮೀನ್ ಸಾಬ್ ನದಾಫ್, ಸಮ್ಮದ್ ಚೌದ್ರಿ, ಕೃಷ್ಣಮೂರ್ತಿ, ಬಸವರಾಜ್ ಹಸಮಕಲ್ ಇದ್ದರು.

ಪೌರಾಯುಕ್ತ, ಸಿಂಧನೂರು ನಗರಸಭೆಮಂಜುನಾಥ ಗುಂಡೂರುಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಸ್ಥಳದ ಅಭಾವ, ಅನ್ಯ ಇಲಾಖೆಯ ಜಾಗಕ್ಕೆ ಲೀಸ್ ಪ್ರಕ್ರಿಯೆಗೆ ಹೋಗಬೇಕಿರುವುದು ಸೇರಿ ಹಲವು ತಾಂತ್ರಿಕ ತೊಡಕುಗಳು ಇದ್ದು, ಇದರ ನಡುವೆಯೂ ಜಿಲ್ಲಾಡಳಿತ, ನಗರಸಭೆಯಿಂದ ಹಲವು ಪ್ರಯತ್ನಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net