ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹ!

6KOKATANUR1 (1)-Web
ಹಲ್ಯಾಳದ ಅಂಬೇಡ್ಕರ್ ಬಡಾವಣೆಯ ರಸ್ತೆ ಮಧ್ಯೆ ಸಂಗ್ರಹಗೊಂಡಿರುವ ಕೊಳಚೆ ನೀರು.
Published on

ಕೊಕಟನೂರ: ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿ ರಸ್ತೆ ಮೇಲೆ ಚರಂಡಿ ನೀರು ಸಂಗ್ರಹಗೊಂಡಿದ್ದು, ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ.

ಗ್ರಾಪಂನಿಂದ ಸಮರ್ಪಕ ಒಳಚರಂಡಿ ನಿರ್ಮಿಸದ ಕಾರಣ ಗ್ರಾಮದ ಮೇಲ್ಭಾಗದ ಬಡಾವಣೆಯಿಂದ ಬರುವ ಚರಂಡಿ ನೀರು ಹಾಗೂ ಕೃಷ್ಣಾ ನದಿಯಿಂದ ರೈತರು ತಮ್ಮ ಗದ್ದೆಗೆ ಒಯ್ದಿರುವ ಪೈಪ್‌ಲೈನ್ ಅಲ್ಲಲ್ಲಿ ಒಡೆದಿದ್ದರಿಂದ ನದಿ ನೀರು ಅಂಬೇಡ್ಕರ್ ಬಡಾವಣೆಯ ರಸ್ತೆ ಮೇಲೆ ನಿಂತು ದುರ್ವಾಸನೆ ಹರಡಿದೆ. ಜನರು ಗ್ರಾಮದೊಳಗೆ ಮತ್ತು ಬಸ್ ನಿಲ್ದಾಣಕ್ಕೆ ಹೋಗಬೇಕಾದರೆ ಈ ಕೊಳಚೆ ನೀರಿನಲ್ಲಿಯೇ ಅನಿವಾರ್ಯವಾಗಿ ಹೋಗುವಂತಾಗಿದೆ. ಅಸ್ವಚ್ಛತೆ ಕಾರಣದಿಂದ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ. ಇದರಿಂದ ಈ ಬಡಾವಣೆಯ ಕೆಲವರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಅಥಣಿ ಹಾಗೂ ನೆರೆಯ ಮಹಾರಾಷ್ಟ್ರದ ಮಿರಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಗ್ರಾಮದಲ್ಲಿ ಸಮರ್ಪಕ ಒಳಚರಂಡಿ ನಿರ್ಮಿಸಿ, ಒಡೆದ ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನ ಹರಿಸಿ, ಈ ಬಡಾವಣೆಯ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಲ್ಯಾಳ ಗ್ರಾಮದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿನ ಒಳಚರಂಡಿ ಸಮಸ್ಯೆ ಬಗ್ಗೆ ನನಗೆ ಮಾಹಿತಿ ಬಂದಿದ್ದು, ವ್ಯವಸ್ಥಿತವಾಗಿ ಒಳಚರಂಡಿ ನಿರ್ಮಿಸುವಂತೆ ಅಲ್ಲಿನ ಪಿಡಿಒಗೆ ಸೂಚಿಸಲಾಗುವುದು. ಅಲ್ಲದೆ, ಯಾವ್ಯಾವ ರೈತರ ಪೈಪ್‌ಲೈನ್ ಒಡೆದಿವೆಯೋ ಅವುಗಳನ್ನು ದುರಸ್ತಿಗೊಳಿಸುವಂತೆ ರೈತರಿಗೆ ಸೂಚಿಸಲಾಗುವುದು.| ರವಿ ಬಂಗಾರೆಪ್ಪನವರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net