

ಮೈಸೂರು: ಕಲಾತ್ಮಕ ಸಾಧನವಾಗಿರುವ ಬೀದಿ ನಾಟಕಗಳು ಸಾಮಾಜಿಕ ಚಿಂತನೆಯನ್ನು ಬಿತ್ತುವ ಸಾಧನವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ) ಹೇಳಿದರು.
ಪರಿವರ್ತನ ರಂಗ ಸಮಾಜ ಮತ್ತು ಸಮುದಾಯ ಮೈಸೂರು ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶನಿವಾರ ಸಫ್ದರ್ ಹಶ್ಮಿ ಅವರ ಜನ್ಮದಿನದ ನೆನಪಿನಲ್ಲಿ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬೀದಿ ನಾಟಕಗಳು ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಲಾತ್ಮಕ ಸಾಧನವಾಗಿರುವ ಬೀದಿ ನಾಟಕಗಳು ಸಾಮಾಜಿಕ ಚಿಂತನೆಯನ್ನು ಬಿತ್ತುವ ಸಾಧನವಾಗಿದೆ. ಅಲ್ಲದೆ ಇಂತಹ ಬೀದಿ ನಾಟಕಗಳಿಂದ ಸಾಂಸ್ಕೃತಿಕ ಒಗ್ಗಟ್ಟು ಸೃಷ್ಟಿಯಾಗಲಿದೆ ಎಂದು ಹೇಳಿದರು..
70ರ ದಶಕದಲ್ಲಿ ಬೀದಿ ನಾಟಕಗಳು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ರೂಪುಗೊಂಡಿತು. ಬೀದಿ ನಾಟಕಗಳಿಂದ ಸಮುದಾಯ ಸಂಘಟನೆ ಸಾಧ್ಯ ಎನ್ನುವುದನ್ನು ನಿರೂಪಿಸಿತು. ಬೀದಿ ನಾಟಕಗಳ ಪ್ರಭಾವದಿಂದ 70ರ ದಶಕದಲ್ಲಿ ದಲಿತ ಮತ್ತು ರೈತ ಸಂಘಟನೆಗಳು ಸ್ಥಾಪನೆಯಾದವು. ಇದರಿಂದ ಚಳವಳಿಗೂ ಸಹ ರೂಪುಗೊಂಡವು ಎಂದು ವಿಶ್ಲೇಷಿಸಿದರು.
ಅಲ್ಲದೆ ತಮ್ಮ ಬೀದಿ ನಾಟಕ ಪ್ರದರ್ಶನದ ಪಯಣದ ಹಾದಿಯನ್ನು ಸಭಿಕರೊಂದಿಗೆ ಹಂಚಿಕೊಂಡರು.
ವಿಚಾರ ಸಂಕಿರಣದಲ್ಲಿ ಸಮುದಾಯ ಸಾಂಸ್ಕೃತಿಕ ಜಾಥಾಗಳ ಮಹತ್ವ-ಪರಿಣಾಮ, ಬೀದಿ ನಾಟಕಗಳ ಇತ್ತಿಚಿನ ಸ್ಥಿತಿಗತಿ, ಸದ್ಯದ ಭಾರತದ ಸಾಂಸ್ಕೃತಿಕ ಬಿಕ್ಕಟ್ಟುಗಳು ವಿಷಯ ಕುರಿತು ಉಪನ್ಯಾಸ ನಡೆಯಿತು.
ವಿಶ್ರಾಂತ ಕುಲಪತಿ ಡಾ.ಮಹದೇವ್, ರಂಗ ಸಮಾಜದ ಸದಸ್ಯ ಶಶಿಧರ್ ಬಾರಿ ಘಾಟ್, ಸಮುದಾಯ ಮೈಸೂರು ಘಟಕ ಕಾರ್ಯಾಧ್ಯಕ್ಷ ಕೆ.ಪಿ.ವಾಸುದೇವನ್, ಪ್ರೊ.ಎಸ್.ಆರ್.ರಮೇಶ್ ಇದ್ದರು