ಬೇಕಲದಲ್ಲಿ ಬೀದಿ ದೀಪಗಳಿಲ್ಲ

street light 1
Published on

ಕಾಸರಗೋಡು: ಕೆ.ಎಸ್.ಟಿ.ಪಿ. ರಾಜ್ಯ ಹೆದ್ದಾರಿಯ ಬೇಕಲ್ ಜಂಕ್ಷನ್ ನಿಂದ ಪೆರಿಯ ರಸ್ತೆಯವರೆಗೆ ಬೀದಿ ದೀಪಗಳಿಲ್ಲದೆ ಬೇಕಲ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ಸಂಕಷ್ಟಕ್ಕೊಳಗಾಗಿದ್ದಾರೆ.

ದಿನನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುವ ಇತಿಹಾಸ ಪ್ರಸಿದ್ಧ ಬೇಕಲಕೋಟೆ ಹಾಗು ಬೇಕಲಬೀಚ್‌ಗೆ ಸಂಚರಿಸಲು
ಕಷ್ಟವಾಗುತ್ತಿದೆ. ಬೇಕಲಬೀಚ್ ಪಾರ್ಕ್‌ಗೆ ಸಂದರ್ಶಕರಿಗೆ ರಾತ್ರಿ 9ರವರೆಗೆ ವಿಸ್ತರಿಸಿದ್ದರಿಂದಾಗಿ ರಾತ್ರಿ ಬಸ್ ನಿಲ್ದಾಣದವರೆಗೆ ನಡೆದು ಹೋಗುವ ಪ್ರವಾಸಿಗರು ಕತ್ತಲೆಯಲ್ಲಿ ತಡಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಗ್ರಾಮಗಳಲ್ಲೂ ಬೀದಿ ದೀಪಗಳು ಬೆಳಗುತ್ತಿರುವಾಗ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿರುವ ಬೇಕಲ ಕೋಟೆ ಪರಿಸರದಲ್ಲಿ ಬೀದಿ ದೀಪಗಳು ಬೆಳಗದಿರುವುದು ಅಪಹಾಸ್ಯವಾಗಿದೆ.

ಪ್ರಸ್ತುತ ಬೇಸಿಗೆ ರಜಾ ಅವಧಿಯಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಮಾತ್ರ ಅಧಿಕೃತರು ಆಸಕ್ತಿ ವಹಿಸುತ್ತಿದ್ದಾರೆಯೇ ಹೊರತು ಪ್ರಾಥಮಿಕ ಅಗತ್ಯಗಳನ್ನು ಪೂರೈಸದೆ ನಿರ್ಲಕ್ಷೃ ವಹಿಸಿದ್ದಾರೆ. ಲಭಿಸುವ ಆದಾಯದ ಬಹುಪಾಲು ನಿರ್ವಹಣಾ ಏಜೆನ್ಸಿಗೆ ತಗಲುವುದರಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೊತ್ತ ಲಭಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಬೀದಿದೀಪ ನಿರ್ವಹಣೆ ಸ್ಥಳೀಯಾಡಳಿತಕ್ಕೆ ಸೇರಿದ್ದಾಗಿದ್ದು, ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗದ ಸ್ಥಿತಿಯಿಂದ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ ಎಂದು ಪಂಚಾಯಿತಿ ಅಧಿಕೃತರು ತಿಳಿಸಿದ್ದಾರೆ.

ಇನ್ನೂ ಇವೆ ಪ್ರವಾಸಿ ಹಲವು ತಾಣಗಳು

ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರದ ಮೂಲಕ ಹೆಚ್ಚು ಆದಾಯಗಳಿಸಬಹುದಾದರೂ ಬೇಕಲಕೋಟೆ ಹಾಗೂ ಪಳ್ಳಿಕ್ಕೆರೆ ಬೀಚ್‌ನ ಬೋಟಿಂಗ್ ಅಲ್ಲದೆ ಬೇರೆ ಕೇಂದ್ರಗಳನ್ನು ಅಭಿವೃದ್ದಿಪಡಿಸಲು ಅಧಿಕೃತರು ಮುಂದಾಗದಿರುವುದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಪುವ್ವಲ್ ಕೋಟೆ, ಆರಿಕ್ಕಾಡಿ ಕೋಟೆ, ಕಾಸರಗೋಡು ಕೋಟೆ, ಬಂದ್ಯೋಡು ಅಡ್ಕಕೋಟೆ, ಮಂಜೇಶ್ವರ ಗಿಳಿವಿಂಡು, ಬಂಗ್ರಮಂಜೇಶ್ವರದ ಜೈನ ಬಸದಿ, ಪೊಸಡಿಗುಂಪೆ, ಹೀಗೆ ಪಟ್ಟಿಮಾಡಿದರೆ ಸಾಕಷ್ಟಿರುವ ಪ್ರಧಾನ ಪ್ರಾಚೀನ ಕುರುಹುಗಳು ಅಭಿವೃದ್ಧಿಗಾಗಿ ಮತ್ತು ಪ್ರವಾಸಿಗರ ಮುಕ್ತ ವೀಕ್ಷಣೆಗೆ ಕಾಯುತ್ತಿದೆ.

ಬೇಕಲ ಪ್ರವಾಸಿ ಧಾಮಕ್ಕೆ ತೆರಳಲು ಬೆಳಕಿಲ್ಲದೆ ಕತ್ತಲಲ್ಲೇ ಅಲೆದಾಡಬೇಕಾದುದು ದುರ್ವಿಧಿ. ಬೇರೆಡೆಗಳಿಂದ ಆಗಮಿಸುವವರಿಗೆ ಬಹಳ ಸಮಸ್ಯೆಯಾಗುತ್ತಿದೆ. ಅಧಿಕೃತರಿಗೆ ಈ ಬಗ್ಗೆ ಹಲವು ಮನವಿ ನೀಡಿದ್ದರೂ ವ್ಯವಸ್ಥೆ ಕಲ್ಪಿಸಿಲ್ಲ. ಕಾರಣವೂ ಅಸ್ಪಷ್ಟವಾಗಿದೆ. ಸ್ಥಳೀಯಾಡಳಿತಕ್ಕೆ ಕಷ್ಟವಾಗುವುದಾದರೆ, ಜಿಲ್ಲಾಡಳಿತವಾದರೂ ಪರಿಹಾರ ಕಲ್ಪಿಸಬೇಕು.- ಮನೋಜ್ ಜಯನ್ ಬೇಕಲ್ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net