

ಹುಬ್ಬಳ್ಳಿ: ನಗರದ ವಿವಿಧ ಕಡೆಗಳಲ್ಲಿ ರಸ್ತೆ ಬದಿ ಹಾಗೂ ಗೂಡಂಗಡಿಗಳಲ್ಲಿ ತಿಂಡಿ, ತಿನಿಸು, ಆಹಾರವನ್ನು ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿದ್ದು, ಇದರ ಶುದ್ಧತೆ, ಅಲ್ಲಿನ ಸುಚಿತ್ವ ಪರಿಶೀಲನೆ ಮಾಡಬೇಕೆಂದು ಮಹಾನಗರ ಪಾಲಿಕೆಗೆ ಇಲ್ಲಿಯ ಭಗತಸಿಂಗ್ ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿಶ್ವ ಆಹಾರ ದಿನದ ಹಿನ್ನಲೆಯಲ್ಲಿ ಸಮಿತಿ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಶಶಿಶೇಖರ ಡಂಗನವರ ಅವರು ಮಹಾನಗರ ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೋಳಿಕರ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ.
ರಸ್ತೆ ಬದಿಯ ತಿಂಡಿ ತಿನಿಸು ಮಾರಾಟ ಮಾಡುವ ಮಳಿಗೆಗಳಲ್ಲಿ ಸುಚಿತ್ವ ಮತ್ತು ಆಹಾರ ಶುದ್ಧತೆ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ.
ಇಲ್ಲಿಯ ವಿದ್ಯಾನಗರ ಕಿಮ್ಸ್ ಹಿಂಭಾಗ, ಶಿರೂರ ಪಾರ್ಕ್, ಅಕ್ಷಯ ಕಾಲನಿ ಮುಂತಾದ ಪ್ರದೇಶಗಳಲ್ಲಿ ರಸ್ತೆ ಬದಿ ತಿಂಡಿ, ತಿನಿಸು ಮಾರಾಟ ಹೆಚ್ಚಾಗಿದೆ. ಆದರೆ, ಇಲ್ಲಿನ ಆಹಾರ ಸುರಕ್ಷತೆ ಪರಿಶೀಲನೆ ಮಾಡುವವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇತ್ತೀಚೆಗೆ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅನೇಕರಿಗೆ ಫುಡ್ ಪಾಯ್ಸನಿಂಗ್ ಆಗುತ್ತಿದೆ. ಸೊಳ್ಳೆ, ನಾಯಿಗಳ ಕಾಟವೂ ವಿಪರೀತವಾಗುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಸೂಕ್ತ ಮಾರ್ಗದರ್ಶನ ನೀಡಿ ಸುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಡಂಗನವರ ಹಾಗೂ ಸೂರಜ ಅವರಾದಿ ಅವರು ಮನವಿ ಮಾಡಿದರು.