ಚಳವಳಿ ರೂಪವಾಗಿವೆ ಬೀದಿ ನಾಟಕ

12 vikram 6
Published on

ಎಪ್ಪತ್ತರ ದಶಕದಲ್ಲಿ ಜನ್ಮತಾಳಿದ ಬೀದಿ ನಾಟಕಗಳು ದಿನನಿತ್ಯ ಸಮಾಜ ವ್ಯವಸ್ಥೆಯಲ್ಲಿ ನಡೆಯುವ ಕೋಮು ಗಲಭೆ, ವರದಕ್ಷಿಣೆ ಸಾವು, ಅನಕ್ಷರಸ್ಥರ ಶೋಷಣೆ ಮೊದಲಾದ ಸಾಮಾಜಿಕ ಕಳಕಳಿ ಹೊತ್ತು ಚಳವಳಿಯ ರೂಪಗಳಾಗಿ ಹುಟ್ಟಿಕೊಂಡಿರುವಂತಹವು ಎಂದು ಉಪನ್ಯಾಸಕಿ ಡಾ. ಸಹನಾ ಪಿಂಜಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಶನಿವಾರ ಏರ್ಪಡಿಸಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಬೀದಿ ನಾಟಕಗಳ ಅಳಿವು-ಉಳಿವು ವಿಷಯ ಕುರಿತು ಮಾತನಾಡಿದರು,
ಬದ್ಧತೆಯಿಂದ ಹುಟ್ಟಿಕೊಂಡ ನಾಟಕಗಳು ಬೀದಿ ನಾಟಕಗಳು. ಅವತ್ತು ಸಾಮಾಜಿಕ ಕಳಕಳಿ ಬೀದಿ ನಾಟಕಗಳಲ್ಲಿ ಇರುತ್ತಿತ್ತು. ಇವತ್ತು ಹಣಕ್ಕಾಗಿ ಬೀದಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಖೇದದ ಸಂಗತಿ. ಸಾಮಾಜಿಕ ಸಮಸ್ಯೆ ಕುರಿತು ಮಾತು, ಮಾತುಗಳಲ್ಲೇ ಹುಟ್ಟಿಕೊಳ್ಳುತ್ತಿದ್ದ ಬೀದಿ ನಾಟಕಗಳಿಗೆ ಸಿದ್ಧವಾದ ಗ್ರಾಂಥಿಕ ಸಾಹಿತ್ಯ ಇರುವುದಿಲ್ಲ. ಆಡು ಮಾತುಗಳಲ್ಲಿಯೇ 15-20 ನಿಮಿಷಗಳಲ್ಲಿ ನಾಟಕಗಳು ಪ್ರದರ್ಶನಗೊಂಡು ಸಂಬಂಧಪಟ್ಟ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭ, ಸನ್ನಿವೇಶಗಳು ಇರುತ್ತವೆ. ಇಂತಹ ನಾಟಕಗಳಿಗೆ ವೇದಿಕೆಗಳನ್ನು ಶಾಲಾ, ಕಾಲೇಜುಗಳಲ್ಲಿ ಕಲ್ಪಿಸಿ ಪ್ರಚಾರ ಮಾಡಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿ, ಬೀದಿ ನಾಟಕಗಳು ಪ್ರಭುತ್ವ ಮತ್ತು ರಾಜಕಾರಣ ವ್ಯವಸ್ಥೆ ವಿರುದ್ಧ ಹುಟ್ಟಿಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಜನರ ಮನಸಿನಲ್ಲಿ ಬದಲಾವಣೆ ಗಾಳಿ ಬೀಸುವ ಪ್ರಯತ್ನ ಮಾಡುತ್ತಾ ಬಂದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಬೀದಿ ನಾಟಕಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಡಾ. ಸಂಜೀವ ಕುಲಕರ್ಣಿ, ಡಾ. ಶ್ರೀಶೈಲ ಹುದ್ದಾರ, ಡಾ. ಸುಖದೇವ ಪಾನಬುಡೆ, ಡಾ. ಶಶಿಧರ ನರೇಂದ್ರ, ಡಾ. ಪ್ರಕಾಶ ಗರುಡ, ರವಿ ಕುಲಕರ್ಣಿ, ಸನ್ಮತಿ ಅಂಗಡಿ, ವಿಷಯಾ ಜೇವೂರ, ಎಚ್.ಡಿ. ನದಾಫ್, ಎಸ್.ಎಂ. ದಾನಪ್ಪಗೌಡರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ನಂತರ ಕೆ. ಪಿ. ಲಕ್ಷ್ಮಣ ನಿರ್ದೇಶನದ ಡಕ್ಲಕಥಾ ದೇವಿಕಾವ್ಯ ನಾಟಕವನ್ನು ಜಂಗಮ ಕಲೆಕ್ಟಿವ್ ತಂಡದವರು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net