ಬೀದಿನಾಯಿಗಳ ಉಪಟಳದ ಭೀತಿ

dog
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ನಗರದಲ್ಲಿ ಶ್ವಾನಗಳ ಸಂತತಿ ದಿನೆ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಂಚಾಕಾರ ತಂದೊಡ್ಡಿದೆ. ಹಿಂಡುಗಟ್ಟಲೆ ಬೀದಿನಾಯಿಗಳು ಸಾರ್ವಜನಿಕರ ಮೇಲೆ ಮುಗಿಬೀಳುತ್ತಿದ್ದು ಜೀವಭಯದಲ್ಲಿ ನಡೆದಾಡುವಂತ ಪರಿಸ್ಥಿತಿ ಎದುರಾಗಿದೆ.

ನಗರ ಪ್ರದೇಶದಲ್ಲಿ ಅಸಮರ್ಪಕ ಕಸ ವಿಲೇವಾರಿಯಿಂದಾಗಿ ರಸ್ತೆ ಬದಿಗಳಲ್ಲಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ಹೆಚ್ಚಾಗಿವೆ. ಇದರೊಂದಿಗೆ ಎಲ್ಲೆದರಲ್ಲಿ ಹೆಚ್ಚಾಗಿರುವ ಮಾಂಸ ಮಾರಾಟದ ಅಂಗಡಿಗಳು, ಹಾಗೂ ಮಾಂಸಹಾರಿ ಹೋಟೆಲ್‌ಗಳ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯಿಂದ ರಸ್ತೆ ಬದಿಗಳಲ್ಲಿ ಕಸದ ರಾಶಿ ದುಪ್ಪಟ್ಟಾಗುತ್ತಿದೆ, ಪ್ರಾಣಿಜನ್ಯ ತ್ಯಾಜ್ಯದ ಭಕ್ಷಣೆಗೆ ಮುಗಿಬೀಳುವ ಬೀದಿನಾಯಿಗಳು ನಂತರದಲ್ಲಿ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿವೆ.

ಸಂತಾನಶಕ್ತಿ ಹರಣ ಸ್ಥಗಿತ? ಹೊಸಕೋಟೆ ನಗರಸಭೆ ಬೀದಿನಾಯಿಗಳ ಸಂತಾನಶಕ್ತಿಹರಣ ಶಸಚಿಕಿತ್ಸೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂಬ ಮಾತು ಕೇಳಿಬರುತ್ತಿದ್ದು, ಇದರಿಂದ ಬೀದಿನಾಯಿಗಳ ಸಂತತಿ ಹೆಚ್ಚಲು ಕಾರಣವಾಗುತ್ತಿದೆ, ಈ ಪ್ರಕ್ರಿಯೆಗೆ ಅನುದಾನದ ಕೊರತೆ ಇದೆ ಎಂಬ ಸಬೂಬು ಕೇಳಿಬರುತ್ತಿದ್ದು ಸಿಬ್ಬಂದಿಯೂ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಕಡಿವಾಣ ಇಲ್ಲ: ಕೋಳಿ ಹಾಗೂ ಮಾಂಸದ ಅಂಗಡಿ ಮಾಲೀಕರು ಪ್ರಾಣಿಜನ್ಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಹಾಗೂ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು ಎಂಬ ನಿಯಮ ರೂಪಿಸಲಾಗಿದೆ ಆದರೆ ನಗರ ಪ್ರದೇಶದಲ್ಲಿ ಈ ನಿಯಮಕ್ಕೆ ಕಿಮ್ಮತ್ತಿಲ್ಲದಂತಾಗಿದೆ. ರಾತ್ರಿ ವೇಳೆ ರಾಶಿಗಟ್ಟಲೆ ಪ್ರಾಣಿಜನ್ಯ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಕೆರೆಗಳ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕೋಳಿ ತ್ಯಾಜ್ಯ ಸುರಿಯುತ್ತಿರುವುದು ಸಾಮಾನ್ಯವಾಗಿದೆ.

ಬೈಕ್ ಸವಾರರಿಗೆ ಸಂಕಷ್ಟ: ಹತ್ತಾರು ನಾಯಿಗಳ ಗುಂಪು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬರುವ ದೃಶ್ಯಗಳು ಸಾಮಾನ್ಯವಾಗಿದೆ. ಈ ದಿಢೀರ್ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾಗುವ ವಾಹನ ಸವಾರರು ಆಯತಪ್ಪಿ ಬೀಳುವುದು ಆಪಘಾತಕ್ಕೆ ಒಳಗಾಗುವುದು ಕಂಡುಬರುತ್ತಿದೆ. ಅಲ್ಲದೆ ಒಂದು ನಾಯಿಯನ್ನು ಮತ್ತಷ್ಟು ನಾಯಿಗಳು ಓಡಾಡಿಸಿಕೊಂಡು ರಸ್ತೆ ಮಧ್ಯೆ ದಿಢೀರ್ ಪ್ರತ್ಯಕ್ಷವಾಗುವುದರಿಂದ ಅವುಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕಿಡಾಗುವ ವಾಹನ ಸವಾರರ ಸಂಕಷ್ಟ ಹೇಳತೀರದಂತಾಗಿದೆ.

 ಶಾಲಾ ಬಾಲಕನ ಮೇಲೆ ದಾಳಿ: ಮುನೇಶ್ವರ ದೇವಸ್ಥಾನ ರಸ್ತೆ ಗೌಡರಕುಪ್ಪಣ್ಣ ಲೇಔಟ್‌ನಲ್ಲಿ ಶನಿವಾರ ಮುಂಜಾನೆ ಶಾಲಾ ಬಾಲಕನೊಬ್ಬ ಶಾಲೆಗೆ ಹೊರಟ್ಟಿದ್ದ ವೇಳೆ ರಸ್ತೆಯಲ್ಲಿ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿವೆ. ದಿಢೀರ್ ಬೆಳವಣಿಗೆಯಿಂದ ವಿಚಲಿನನಾದ ವಿದ್ಯಾರ್ಥಿ ಗಾಬರಿಗೊಂಡು ನಾಯಿಗಳನ್ನು ಎದುರಿಸಲು ಹರಸಾಹಸ ನಡೆಸಿದ್ದಾನೆ. ಅದೃಷ್ಟವಶಾತ್ ನಾಯಿಗಳ ಗಲಾಟೆ ಹಾಗೂ ವಿದ್ಯಾರ್ಥಿ ಕೂಗಾಡುತ್ತಿದ್ದ ಸದ್ದು ಕೇಳಿ ನೆರೆಮನೆಯವರು ಹೊರಬಂದಿದ್ದಾರೆ ಇದರಿಂದ ಹೆದರಿದ ನಾಯಿಗಳು ಸ್ಥಳದಿಂದ ಪರಾರಿಯಾಗಿವೆ. ಅದೃಷ್ಟವಶಾತ್ ವಿದ್ಯಾರ್ಥಿ ಪಾರಾಗಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಲಾ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಲು ಮುಂದಾಗಿದ್ದವು, ಇನ್ನೇನು ಕಚ್ಚಿಗಾಯಗೊಳಿಸಲಿವೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟರಲ್ಲಿ ನಾವೆಲ್ಲ ಜೋರಾಗಿ ಸದ್ದು ಮಾಡುತ್ತಾ ಹೊರಬಂದಿದ್ದರಿಂದ ನಾಯಿಗಳು ಪರಾರಿಯಾಗಿವೆ ಇಲ್ಲವಾಗಿದ್ದರೆ ಬಾಲಕನ ಪರಿಸ್ಥಿತಿ ಏನಾಗುತ್ತಿತ್ತೋ, ಅದೃಷ್ಟವಶಾತ್ ಪಾರಾಗಿದ್ದಾನೆ. ಬೀದಿನಾಯಿಗಳಿಗೆ ಶಸಚಿಕಿತ್ಸೆಯಾಗಲಿ, ಲಸಿಕೆಯಾಗಲಿ ನೀಡುವುದು ಇದುವರಗೆ ನಾವು ನೋಡಿಲ್ಲ. ನಗರಸಭೆ ಗಮನ ನೀಡಬೇಕು.

ಹನುಮಂತರಾಜು, ಕುಪ್ಪಣ್ಣಬಡಾವಣೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net