

ಕಂಪ್ಲಿ: ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದೆ. ಎಲ್ಲೆಂದರಲ್ಲೆ ನಾಯಿಗಳು ಗುಂಪುಗುಂಪಾಗಿ ಸಂಚರಿಸುತ್ತಿವೆ. ಹಾಡಹಗಲೇ ಅಪರಿಚಿತರ ಮೇಲೆ ದಾಳಿ ಮಾಡುತ್ತವೆ. ಬೀದಿನಾಯಿಗಳ ಉಪಟಳಕ್ಕೆ ಹಗಲಲ್ಲೇ ಸಂಚರಿಸಲು ಸಾರ್ವಜನಿಕರು ಹೆದರುವಂತಾಗಿದೆ.
ಮಾಂಸದಂಗಡಿ, ಹೋಟೆಲ್, ಬೇಕರಿ, ತಳ್ಳುಬಂಡಿಗಳ ಬಳಿ ಬೀದಿನಾಯಿಗಳು ಆಹಾರಕ್ಕಾಗಿ ಓಡಾಡುತ್ತಿವೆ.
ರಸ್ತೆ ದಾಟುವಾಗ ನಾಯಿಗಳು ಅಡ್ಡ ಚಲಿಸಿ ದ್ವಿಚಕ್ರವಾಹನ ಸವಾರರ ಆಯತಪ್ಪಿಸಿ ಬಿದ್ದು ಗಾಯಗೊಂಡಿದ್ದಾರೆ. ಓಣಿಗಳಲ್ಲಿ ನಾಯಿಗಳ ತಾಪಾತ್ರಯ ಹೆಚ್ಚಿದ್ದು ಅಪರಿಚಿತರನ್ನು ಬೆನ್ನಟ್ಟಿ ಬೆಚ್ಚಿಬೀಳಿಸುತ್ತಿವೆ. ಬೀದಿ ನಾಯಿಗಳ ಉಪಟಳ ತಗ್ಗಿಸುವಂತೆ ಪುರಸಭೆ ಸಭೆಯಲ್ಲಿ ಚರ್ಚೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ.
ತಾಲೂಕಿನಲ್ಲಿ 165 ಸಾಕು ನಾಯಿ, 1,520 ಬೀದಿನಾಯಿ ಸೇರಿದಂತೆ ಒಟ್ಟಾರೆ 1,685 ನಾಯಿಗಳಿವೆ. ಪಟ್ಟಣದಲ್ಲಿ 120 ಸಾಕು ನಾಯಿ, 70ಕ್ಕು ಅಧಿಕ ಬೀದಿ ನಾಯಿಗಳಿವೆ. ನಾಯಿ ಗಣತಿ ಪ್ರಗತಿಯಲ್ಲಿದೆ.
ಬೀದಿ ನಾಯಿಗಳಿಗೆ ರೇಬೀಸ್ ಚುಚ್ಚು ಮದ್ದು ಹಾಕುವ ಮೂಲಕ ನಾಯಿ ಕಡಿತದ ಪರಿಣಾಮವನ್ನು ಪೂರ್ಣ ತಗ್ಗಿಸುವ ಕ್ರಮವನ್ನು ಪುರಸಭೆ ಕೈಗೊಳ್ಳಬೇಕು. ಬೀದಿನಾಯಿ, ಪಕ್ಷಿಗಳ ಕಾಳಜಿಗೆ ತಕ್ಕ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಣಿ ದಯಾ ಸಂಘದ ನಿಯೋಜಿತ ಪದಾಧಿಕಾರಿಗಳಾದ ಮಾಧವರೆಡ್ಡಿ, ಜಯಪ್ರಕಾಶ ಚೌದ್ರಿ, ಬಿ.ಲಕ್ಷ್ಮಣ ಇತರರು ತಿಳಿಸಿದ್ದಾರೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಚಿಕಿತ್ಸೆಯೇ ರಾಮಬಾಣವಾಗಿದೆ. ಆಸಕ್ತರು ಮುಂದೆ ಬಂದಲ್ಲಿ ಪ್ರಾಣಿ ದಯಾ ಸಂಘಕ್ಕೆ ಅವಕಾಶ ನೀಡಲಾಗುವುದು ಎಂದು ಪಶು ಮುಖ್ಯ ವೈದ್ಯಾಧಿಕಾರಿ ಕೆ.ಯು.ಬಸವರಾಜ ತಿಳಿಸಿದರು.
ಬೀದಿ ನಾಯಿ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಉದ್ದೇಶಿಸಿದ್ದು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪುರಸಭೆ ನಿಧಿಯಿಂದ ಹಣ ಭರಿಸಲು ಯೋಜಿಸಿದೆ. ಕೆ.ದುರುಗಣ್ಣ ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ ಕಂಪ್ಲಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಹಾಡಹಗಲೇ ಹತ್ತಾರು ನಾಯಿಗಳು ಗುಂಪುಗೂಡಿ ಭಯಭೀತಗೊಳಿಸುತ್ತವೆ. ಚಿಕ್ಕಮಕ್ಕಳಿಗೆ ತೊಂದರೆ ಆಗುವ ಮುನ್ನವೇ ಬೀದಿ ನಾಯಿಗಳನ್ನು ನಿಯಂತ್ರಿಸಬೇಕಿದೆ. ಸಿ.ಆರ್.ಹನುಮಂತ ಪುರಸಭೆ ಸದಸ್ಯ, ಕಂಪ್ಲಿ