

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಇತ್ತೀಚೆಗೆ ರಾಜಧಾನಿಯಲ್ಲಿ ರಸ್ತೆ, ಚರಂಡಿ ಮೂಲಸೌಲಭ್ಯಗಳ ಕುರಿತು ಚರ್ಚೆ ಹೆಚ್ಚಾಗುತ್ತಿದ್ದು, ನಗರಕ್ಕೆ ಬಾದಿಸುವ ಕೆಲವು ಪ್ರಮುಖ ಸಮಸ್ಯೆಗಳನ್ನು ಜನ ತಮಗೆ ಅವಕಾಶವಿರುವ ವೇದಿಕೆಯಲ್ಲಿ ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದಾರೆ.
ಅದರಲ್ಲೂ, ಕೆಲವು ಸಮಸ್ಯೆಗಳು ರಾಜ್ಯದ ಗಡಿ ದಾಟಿದಾಗ ಮುನ್ನೆಲೆಗೆ ಬಂದರೆ, ಇದೀಗ ವಿದೇಶಿ ಪ್ರಜೆಯೊಬ್ಬ ಇಲ್ಲಿನ ಸಮಸ್ಯೆ ಬಗ್ಗೆ ವ್ಯಂಗ್ಯವಾಡಿರುವ ಪೋಸ್ಟ್ ವೈರಲ್ ಆಗಿದೆ.
ರಸ್ತೆ ಗುಂಡಿ, ಕಸದ ಸಮಸ್ಯೆ ಸಾಮಾನ್ಯ ಚರ್ಚಾ ವಿಷಯವಾಗಿ ಬದಲಾಗಿದ್ದರೆ, ಈ ವಿದೇಶಿ ಪ್ರಜೆಯು ಬೀದಿನಾಯಿಗಳ ಹಾವಳಿ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ. ನಗರದಲ್ಲಿ ಜಾಗಿಂಗ್ ಮಾಡುತ್ತಿದ್ದ ವೇಳೆ ವಿದೇಶಿ ಉದ್ಯಮಿಯೊಬ್ಬರ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದೆ. ಯುನೈಟೆಡ್ ಕಿಂಗ್ ಡಮ್ (ಯುಕೆ) ಮೂಲದ ಉದ್ಯಮಿ, ಗೇಮ್ ಡಿಸೈನರ್ ಒಲಿವರ್ ಜಾನ್ಸ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವಿಚಾರವನ್ನು ತಮ್ಮಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಹಂಚಿಕೊಂಡ ಒಲಿವರ್, "ನಾನು ಬೀದಿನಾಯಿಗಳನ್ನು ಪ್ರೀತಿಸುತ್ತೇನೆ. ವಿಶೇಷವಾಗಿ ಬೆಂಗಳೂರಿನಲ್ಲಿ ಓಡುವಾಗ' ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಹಳೇ ಏರ್ಪೋರ್ಟ್ ರ್ಟಮಿನಲ್ ಪ್ರವೇಶ ದ್ವಾರದ ಬಳಿ ಜಾಗಿಂಗ್ ಮಾಡುತ್ತೇನೆ. ಈ ವೇಳೆ ಆಕ್ರಮಣಕಾರಿ ವರ್ತನೆಯ ನಾಯಿಗಳ ಗುಂಪಿನಿಂದ ಬಂದ ಶ್ವಾನವೊಂದು ಕಚ್ಚಿದೆ. ಕೂಡಲೇ ಸ್ಥಳಿಯರು ಗಮನಿಸಿ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ನಾಯಿ ಕಡಿತಕ್ಕೆ ಸಂಬಂಧಿಸಿದ ಇಂಜೆಕ್ಷನ್ ಪಡೆದಿದ್ದೇನೆ. ನಾಯಿಗಳ ಗುಂಪು ನನ್ನ ಪತ್ನಿ ಮೇಲೆಯೂ ಸ್ವಲ್ಪದರಲ್ಲೇ ದಾಳಿ ಮಾಡುತ್ತಿದ್ದವು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
6 ಲಕ್ಷಕ್ಕೂ ಅಧಿಕ ವೀಕ್ಷಣೆ!
ಅ.20ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಈ ಪೋಸ್ಟ್ಗೆ ಹುಷಾರಾಗಿರಿ, ಬೇಗ ಗುಣಮುಖರಾಗಿ, ಶ್ವಾನವು ನಿಮ್ಮನ್ನೇ ಗುರಿಯಾಗಿಸಿಕೊಂಡಿರುವುದು ವಿಷಾದಕರ. ನಮ್ಮ ರಾಜಕಾರಣಿಗಳು ನಿಷ್ಪ್ರಯೋಜಕರು ಹೀಗೆ ಹಲವು ಕಾಮೆಂಟ್ಗಳು ಬಿದ್ದಿದೆ. ಮತ್ತೊಬ್ಬರು, ನೀವು ನಿಮ್ಮ ದೇಶಕ್ಕೆ ಮರಳಬಾರದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಲಿವರ್, ನಾನು ಭಾರತ ಬಿಡುವುದಿಲ್ಲ. ಯಾಕೆಂದರೆ ಇಲ್ಲಿಯೇ ಏನಾದರೂ ಮಾಡಬೇಕು ಎಂದು ನಂಬಿಕೊಂಡಿದ್ದೇನೆ. ಆ ಮಾರ್ಗದಲ್ಲೇ ನಡೆಯಲು ಬಯಸುತ್ತೇನೆ. ಅದರಲ್ಲಿ ನಾಯಿ ಕಡಿತವೂ ಸೇರಿರಬಹುದು. 300 ಡಾಲರ್ ಇಟ್ಟುಕೊಂಡು ಈ ಹೊಸ ದೇಶಕ್ಕೆ ಬಂದು ಪಾರಿವಾಳಗಳ ಗೂಡಿನೊಂದಿಗೆ ವಾಸವಿದ್ದೇನೆ. ಈಗ 100 ಮಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯವಿರುವ ಎರಡು ಸ್ಟಾರ್ಟಪ್ಗಳನ್ನು ಸ್ಥಾಪಿಸಿದ್ದೇನೆ. ನಾನು ಈ ರೀತಿ ಬೆಳೆಯುವುದನ್ನು ದೂರದಿಂದ ನನ್ನ ಪಾಲಕರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.