

ಸಿಂಧನೂರು: ಮಾಂಸ ಮಾರಾಟಗಾರರು ಹಾಗೂ ಹೋಟೆಲ್‌ನವರು ನಗರಸಭೆಯ ನಿಯಮಗಳನ್ನು ಮೀರಿ ಬೀದಿ ನಾಯಿಗಳಿಗೆ ಆಹಾರ ನೀಡಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೀದಿ ನಾಯಿ, ಬಿಡಾಡಿ ದನ ಸ್ಥಳಾಂತರಿಸಿ
ನಗರಸಭೆಯಿಂದ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ವೇಳೆ ಮಂಗಳವಾರ ಮಾತನಾಡಿದರು. ನಗರದ ಸ್ವಾಸ್ಥ್ಯಕ್ಕಾಗಿ ನಾಯಿಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಅವುಗಳಿಗೆ ಹಿಂಸೆ, ಗಾಯಗಳಾಗದಂತೆ ಮುಂಜಾಗ್ರತೆ ವಹಿಸಿ ರೇಬಿಸ್ ಚುಚ್ಚುಮದ್ದಿಗೆ ಒಳಪಡಿಸಲಾಗಿದೆ ಎಂದರು.
ಬೀದಿ ನಾಯಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಾಯಿಗಳಿಗೆ ವಿನಾಕಾರಣ ತೊಂದರೆ ನೀಡುವುದು ಹಾಗೂ ಆಹಾರ ನೀಡುವುದನ್ನು ಮಾಡಬಾರದು. ಹೋಟೆಲ್‌ನವರು ನಿಯಮಗಳನ್ನ ಮೀರಿ ಆಹಾರ ನೀಡಿದ್ದು ಕಂಡುಬಂದಲ್ಲಿ ಪರವಾನಗಿ ರದ್ದು ಪಡಿಸಲಾಗುವುದು.
ನಗರದಲ್ಲಿ ನಾಯಿಗಳಿಂದ ಏನಾದರೂ ತೊಂದರೆಯಾದಲ್ಲಿ ನಗರಸಭೆಯ ಆರೋಗ್ಯ ಶಾಖೆಗೆ ತಿಳಿಸಬೇಕು ಎಂದು ಮಂಜುನಾಥ ತಿಳಿಸಿದರು. ನಗರಸಭೆಯ ಆರೋಗ್ಯ ಶಾಖೆಯ ಕಿಶನ್, ಮಹೇಶ, ಲಕ್ಷ್ಮೀಪತಿ, ಮೌನೇಶ, ವೆಂಕೋಬ, ಅಮರೇಶ ಇದ್ದರು.