

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಶುಕ್ರವಾರ ಮುಂಜಾನೆ ನುಗ್ಗಿದ ಬೀದಿ ನಾಯಿಗಳು ಹಾಗೂ ಸಾಕುನಾಯಿಗಳ ಹಿಂಡು ಸುಮಾರು 10 ಕಾಡುಕುರಿ(ಚಿಚ್ಟಜ್ಞಿಜ ಛಿಛ್ಟಿ)ಗಳನ್ನು ಅಟ್ಟಾಡಿಸಿ ಕೊಂದು ಹಾಕಿವೆ.
ಘಟನೆ ಸಂದರ್ಭ ಬೆನ್ನಟ್ಟುತ್ತಿರುವ ನಾಯಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಏಳೆಂಟು ಕಾಡುಕುರಿಗಳು ಆವರಣ ಗೋಡೆಗೆ ಬಡಿದು ಗಾಯಗೊಂಡಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೃಗಾಲಯದ ಸುತ್ತ ಆವರಣ ಗೋಡೆ ಇದ್ದು, ರಾತ್ರಿ ಗಾಳಿ ಮಳೆಗೆ ಆವರಣಗೋಡೆಯ ಒಂದು ಭಾಗದ ಮೇಲೆ ಮರ ಬಿದ್ದಿದೆ. ಈ ಮರವನ್ನೇರಿ ನಾಯಿಗಳು ಮೃಗಾಲಯ ಪ್ರವೇಶಿಸಿರಬಹುದು ಎಂದು ಉದ್ಯಾವನದ ನಿರ್ದೇಶಕ ಜಯಪ್ರಕಾಶ ಭಂಡಾರಿ ಶಂಕೆ ವ್ಯಕ್ತಿಪಡಿಸಿದ್ದಾರೆ.
ಸುತ್ತ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮತ್ತು ಆವರಣ ಗೋಡೆಯನ್ನು ಎತ್ತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಹೊತ್ತು ಭದ್ರತಾ ಸಿಬ್ಬಂದಿ ಮೃಗಾಲಯದ ಒಳಗೆ ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾಡುಕುರಿಗಳಿದ್ದ ಪ್ರದೇಶದ ರಕ್ಷಣಾ ಪರದೆಯು ಕೆಲವು ಭಾಗಗಳಲ್ಲಿ ಹರಿದು ಹೋಗಿರುವುದರಿಂದ ನಾಯಿಗಳಿಗೆ ದಾಳಿ ನಡೆಸಲು ಅವಕಾಶ ದೊರೆತಿದೆ ಎಂದು ಹೇಳಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿ ಉದ್ಯಾನವನದಲ್ಲಿ ಕರ್ತವ್ಯದಲ್ಲಿದ್ದು. ನಾಯಿಗಳ ದಾಳಿ ಗಮನಕ್ಕೆ ಬಂದಿಲ್ಲ. ಮುಂಜಾನೆ ಪ್ರಾಣಿಗಳ ಪಾಲಕರು ಮೃಗಾಲಯಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆಡಳಿತ ವ್ಯವಸ್ಥೆಯಲ್ಲಿ ಲೋಪ?
ಕಾಡುಕುರಿಗಳ ಸಾವು ಸಂಭವಿಸಿದ ರೀತಿ ಅಲ್ಲಿನ ಆಡಳಿತ ವ್ಯವಸ್ಥೆಯನ್ನೇ ಸಾರ್ವಜನಿಕರು ಅನುಮಾನದಿಂದ ನೋಡುವಂತೆ ಮಾಡಿದೆ. ಮೃಗಾಲಯದ ಆವರಣ ಗೋಡೆಯು ಘಟನೆ ನಡೆದ ಹಿಂದಿನ ದಿನ ಕುಸಿದಂತೆ ಕಾಣುತ್ತಿಲ್ಲ. ಬಹಳ ದಿನಗಳ ಹಿಂದೆಯೇ ಕುಸಿದಿದ್ದರೂ ದುರಸ್ತಿಗೆ ಗಮನ ಕೊಟ್ಟಂತಿಲ್ಲ. ನಾಯಿಗಳ ಹಿಂಡು ಭಾರಿ ಪ್ರಮಾಣದಲ್ಲಿ ಪ್ರಾಣಿಗಳನ್ನು ಬೇಟೆಯಾಡಿದರೂ ಭದ್ರತಾ ಸಿಬ್ಬಂದಿಗೆ ತಿಳಿಯದಿರಲು ಕಾರಣವೇನು? ಕರ್ತವ್ಯದಲ್ಲಿ ಇರಲಿಲ್ಲವೇ ಎಂಬ ಪ್ರಶ್ನೆಗಳೆದ್ದಿವೆ. ಇಂತಹ ಅನೇಕ ಪ್ರಶ್ನೆಗಳಿಗೆ ಪೂರಕವಾಗಿ ಕೆಲ ಪ್ರಾಣಿಗಳ ಗೂಡು/ ಪಂಜರಗಳು ಸುಸ್ಥಿತಿಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ಈ ನಡುವೆ, ಗುರುವಾರ ರಾತ್ರಿ ಕಾಂಪೌಂಡ್ ಕುಸಿದಿದೆ ಎಂಬುದನ್ನು ಬಿಂಬಿಸುವ ಚಿತ್ರಗಳನ್ನು ನಿಸರ್ಗಧಾಮದ ಮೂಲಗಳು ನೀಡಿವೆ.