

ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
ಶಿವಗಂಗೆ ರಸ್ತೆ ಅಪಘಾತ ವಲಯವಾಗಿದ್ದು, ಪ್ರಯಾಣಿಕರ ಪಾಲಿಗೆ ಮೃತ್ಯುಕೂಪವಾಗಿದೆ. ದಾಬಸ್‌ಪೇಟೆ-ಹೊನ್ನೇನಹಳ್ಳಿ ರಸ್ತೆ 2 ಕಿಮೀ ವ್ಯಾಪ್ತಿಯಲ್ಲಿ ಸಾಕಷ್ಟು ಮಾಂಸ ಮಾರಾಟ ಅಂಗಡಿಗಳು ಮತ್ತು ಮಾಂಸಾಹಾರದ ಹೋಟೆಲ್‌ಗಳಿದ್ದು, ಈ ಭಾಗದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದೆ ಎಂದು ಹೊನ್ನೇನಹಳ್ಳಿ ಗ್ರಾಮಸ್ಥರು ಮತ್ತು ತಾಂಡಾ ನಿವಾಸಿಗಳು ದೂರಿದ್ದಾರೆ.
ಈ ರಸ್ತೆಯಲ್ಲಿರುವ ಅಂಗಡಿಗಳು ಮತ್ತು ಹೋಟೆಲ್‌ನವರು ಮಾಂಸದ ತ್ಯಾಜ್ಯವನ್ನು ಬೀದಿ ಬದಿಯೇ ವಿಲೇ ಮಾಡುತ್ತಾರೆ. ಇದನ್ನು ತಿನ್ನಲು ನೂರಾರು ನಾಯಿಗಳು ಬರುತ್ತವೆ. ಅಲ್ಲದೆ, ಹಂದಿ ಮಾಂಸ ಮಾರಾಟಗಾರರು ನೂರಾರು ಹಂದಿಗಳನ್ನು ಸಾಕಿಕೊಂಡಿದ್ದು, ಅವನ್ನು ರಸ್ತೆಯಲ್ಲೇ ಪಾಲನೆ ಮಾಡುತ್ತಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಭಾರಿ ಅಡಚಣೆಯಾಗುತ್ತಿದೆ. ಇವು ಹಠಾತ್ತನೆ ಗಾಡಿಗಳ ಮುಂದೆ ಬರುವುದರಿಂದ ನಿತ್ಯ ಅಪಘಾತ ಸಂಭವಿಸುತ್ತಿದ್ದು, ಸಾಕಷ್ಟು ಜನರಿಗೆ ಗಂಭೀರ ಗಾಯಗಳಾಗಿವೆ.
ಈ ಹಿನ್ನೆಲೆಯಲ್ಲಿ ಹಂದಿ, ಕುರಿ ಮಾಂಸ ಮಾರಾಟದ ಅಂಗಡಿಗಳು ಮತ್ತು ಮಾಂಸದ ಹೋಟೆಲ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ನೆಲಮಂಗಲ ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
3 ಗ್ರಾಪಂ ವ್ಯಾಪ್ತಿಯ ರಸ್ತೆ: ದಾಬಸ್‌ಪೇಟೆಯಿಂದ ಹೊನ್ನೇನಹಳ್ಳಿವರೆಗಿನ 2 ಕಿಮೀ ಉದ್ದದ ರಸ್ತೆ ಸೋಂಪುರ, ಅಗಳಕುಪ್ಪೆ ಮತ್ತು ಹೊನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿರುವ ನೂರಾರು ಬೀದಿ ನಾಯಿಗಳನ್ನು ಹಿಡಿಯುವ ಜತೆಗೆ ಹಂದಿ ಸಾಕಣೆಯಲ್ಲಿ ತೊಡಗಿರುವವರಿಗೆ ಸ್ವಂತ ಜಾಗದಲ್ಲಿ ಸಾಕಿಕೊಳ್ಳುವಂತೆ ಸೂಚಿಸಬೇಕು ಎಂದು ಹೊನ್ನೇನಹಳ್ಳಿ ಗ್ರಾಮಸ್ಥರು ಮತ್ತು ಹೊನ್ನೇನಹಳ್ಳಿ ತಾಂಡಾ ನಿವಾಸಿಗಳು ಮೂರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.
ಶಿವಗಂಗೆ ಪ್ರಸಿದ್ಧವಾದ ಧಾರ್ಮಿಕ ಕೇಂದ್ರ. ದಿನವೂ ಸಹಸ್ರಾರು ಭಕ್ತರು ದೇಗುಲಕ್ಕೆ ಬರುತ್ತಾರೆ. ಈ ಮಾರ್ಗದಲ್ಲಿರುವ ಮಾಂಸದ ಅಂಗಡಿಗಳು ಮತ್ತು ಹೋಟೆಲ್‌ಗಳಿಂದಾಗಿ ದೇಗುಲಕ್ಕೆ ಬಂದು ಹೋಗಲು ಭಕ್ತರಿಗೆ ಮುಜುಗರವಾಗುತ್ತಿದೆ. ಆದ್ದರಿಂದ, ಮಾಂಸದ ಅಂಗಡಿಗಳು ಮತ್ತು ಹೋಟೆಲ್ ಬೇರೆಡೆಗೆ ಸ್ಥಳಾಂತರಿಸಬೇಕು. ಪ್ರತಾಪನಾಯ್ಕ, ಹೊನ್ನೇನಹಳ್ಳಿ ನಿವಾಸಿ ಶಿವಗಂಗೆ ಸರ್ಕಲ್‌ನಲ್ಲಿ ಹಲವು ಕೋಳಿ, ಹಂದಿ, ಕುರಿ ಮತ್ತು ಮೇಕೆ ಮಾಂಸ ಮಾರಾಟ ಅಂಗಡಿಗಳಿವೆ. ಈ ಅಂಗಡಿಗಳವರು ರಸ್ತೆ ಬದಿಯಲ್ಲೇ ತ್ಯಾಜ್ಯ ವಿಲೇವಾರಿ ಮಾಡುವುದರಿಂದ, ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಸಾಲದ್ದಕ್ಕೆ ಸಾಕು ಹಂದಿಗಳು ರಸ್ತೆಯಲ್ಲೇ ಓಡಾಡುತ್ತವೆ. ಇದರಿಂದ ರಸ್ತೆಯಲ್ಲಿ ಓಡಾಡಲು ಜನರು ಹೆದರುವ ಸ್ಥಿತಿ ಇದೆ. ಲಿಂಗದೇವರು, ಹೊನ್ನೇನಹಳ್ಳಿ ನಿವಾಸಿ ಮಾಂಸದ ಅಂಗಡಿ ಮಾಲೀಕರು ತ್ಯಾಜ್ಯವನ್ನು ಬೀದಿ ಬದಿ ವಿಲೇವಾರಿ ಮಾಡದೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಈ ಸಮಸ್ಯೆ ಪರಿಹರಿಸುವಂತೆ ಕೋರಿ ಗ್ರಾಮಸ್ಥರು ಮನವಿ ಕೊಟ್ಟಿದ್ದಾರೆ. ಈ ಕುರಿತು ಚರ್ಚಿಸಿ, ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಇದಕ್ಕೂ ಜಗ್ಗದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಲಕ್ಷ್ಮೀನಾರಾಯಣ, ನೆಲಮಂಗಲ ತಾಪಂ ಕಾರ್ಯನಿರ್ವಹಣಾಧಿಕಾರಿ