

ಪ್ರಕಾಶ್ ಮಂಜೇಶ್ವರ ಮಂಗಳೂರು
ನಗರದ ಕೊಟ್ಟಾರ ಚೌಕಿ ಜಂಕ್ಷನ್ ಮತ್ತು ಪಣಂಬೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರ ಎರಡೂ ಬದಿ ಗುಟುರು ಹಾಕುತ್ತ ಓಡಾಡುವ ದೈತ್ಯ ದನ ಹಾಗೂ ಹೋರಿಗಳ ಗುಂಪು ಸಾರ್ವಜನಿಕರು, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಮಹಿಳೆಯರು ಹಾಗೂ ಮಕ್ಕಳಲ್ಲಿ ಭೀತಿ ಸೃಷ್ಟಿಸುತ್ತಿದೆ.
ನವಮಂಗಳೂರು ಬಂದರು(ಎನ್‌ಎಂಪಿಟಿ) ಸಮೀಪದಲ್ಲೇ ಇತ್ತೀಚೆಗೆ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಾದ ದನಗಳ ಗುಂಪಿಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಇನ್ನು ಬೆದೆಗೆ ಬಂದ ದನಗಳು ಹಾಗೂ ಪರಸ್ಪರ ಕಾಳಗಕ್ಕೆ ನಿಂತ ಹೋರಿಗಳು ಅತ್ಯಂತ ಅಪಾಯಕಾರಿಯಾಗಿವೆ. ಇದರ ಕಿತಾಪತಿ ಅಮಾಯಕ ಜನರ ಪ್ರಾಣಕ್ಕೆ ಕಂಟಕವಾದ ಸಂದರ್ಭಗಳೂ ಇವೆ.
ಮಾಲೀಕರೇ ಇಲ್ಲ: ರಾಷ್ಟ್ರೀಯ ಹೆದ್ದಾರಿ ಆಸುಪಾಸು ಬೆಳೆದಿರುವ ಹುಲ್ಲು ತಿನ್ನಲು ಈ ಪಶು ಪರಿವಾರ ಅಡ್ಡಾಡುತ್ತಿವೆ. ಈ ಪ್ರಾಣಿಗಳಲ್ಲಿ ಹೆಚ್ಚಿನವುಗಳಿಗೆ ಮಾಲೀಕರೇ ಇಲ್ಲ. ಹತ್ತಿರದ ಎನ್‌ಎಂಪಿಟಿ ಕಾಂಪೌಂಡ್ ಒಳಗೆ ಹಾಗೂ ಹೊರಗೆ ಅಲ್ಲಿ ಇಲ್ಲಿ ಸಿಗುವ ಆಹಾರ ತಿಂದು ಅವು ಬದುಕುತ್ತವೆ. ಆಸುಪಾಸಿನ ನಾಗರಿಕರು, ಎನ್‌ಎಂಪಿಟಿ ಸಿಬ್ಬಂದಿ ಕೂಡ ಇವುಗಳು ಹೊಟ್ಟೆ ತುಂಬಿಸಿಕೊಳ್ಳಲು ನೆರವಾಗುತ್ತಾರೆ.
1974ರಲ್ಲಿ ನವಮಂಗಳೂರು ಬಂದರು ಆರಂಭವಾದ ಕಾಲದಿಂದಲೂ ಈ ಪ್ರಾಣಿಗಳು ಇಲ್ಲಿ ಸಂತಾನ ವೃದ್ಧಿಸಿಕೊಂಡು ಹೋಗಿವೆ. ಅನಿಮಲ್ ಕೇರ್ ಸಂಸ್ಥೆಯವರ ಅಂದಾಜು ಪ್ರಕಾರ 200ಕ್ಕೂ ಅಧಿಕ ಮಾಲೀಕರಿಲ್ಲದ ಇಂಥ ದನ ಮತ್ತು ಹೋರಿಗಳು ಇಲ್ಲಿವೆ. ಅದರಲ್ಲಿ ಕೆಲವು ಮಾತ್ರ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾಣಿಸಿಕೊಳ್ಳುತ್ತಿವೆ. ಇದರಲ್ಲಿ ಕರು ಹಾಕಿದ ದನಗಳ ಹಾಲು ಕರೆಯುವವರು ಇಲ್ಲದ ಕಾರಣ ಈ ಕರುಗಳೇ ಯಥೇಚ್ಛ ಹಾಲು ಕುಡಿದು ದಷ್ಟಪುಷ್ಟವಾಗಿ ಬೆಳೆಯುತ್ತಿವೆ.
ಪರ್ಯಾಯ ವ್ಯವಸ್ಥೆ ಇಲ್ಲ: ಈ ಬೀಡಾಡಿ ದನಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಪ್ರಯತ್ನ ಕೆಲವು ದಶಕಗಳಿಂದ ನಡೆಯುತ್ತಿದ್ದರೂ, ಪರಿಹಾರ ದೊರೆತಿಲ್ಲ. ಹೊಸನಗರ ಶ್ರೀ ರಾಮಚಂದ್ರಾಪುರ ಮಠಕ್ಕೆ ಇಲ್ಲಿನ ಕೆಲವು ಹಸುಗಳನ್ನು ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಲಾಗಿದೆ. ಆದರೆ ಈ ಗೋವುಗಳು ಪೂರ್ಣ ಪ್ರಮಾಣದಲ್ಲಿ ಕಾಡುಪ್ರಾಣಿಗಳ ಸ್ವಭಾವ ಹೊಂದಿವೆ. ಆದ್ದರಿಂದ ಇವುಗಳನ್ನು ಬೇರೆಡೆಗೆ ಕೊಂಡೊಯ್ಯುವುದು ಹಾಗೂ ಸಾಕುವುದು ಎರಡೂ ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಬಾಕ್ಸ್
ಗೋವುಗಳಿಗೂ ರಕ್ಷಣೆ ಇಲ್ಲ
ಮಾಲೀಕರಿಲ್ಲದ ಈ ಗೋವುಗಳಿಗೆ ರಕ್ಷಣೆಯೂ ಇಲ್ಲ. ಅನೇಕ ಗೋವುಗಳನ್ನು ಮೋಸದಿಂದ ಕಡಿದು ಮಾಂಸಕ್ಕಾಗಿ ಬಳಸಲಾಗಿದೆ. ಕೆಲವು ಗೋವುಗಳು ಕೈಕಾಲು ಕಡಿದ ಸ್ಥಿತಿಯಲ್ಲೇ ಸುರಿಯುವ ರಕ್ತದೊಂದಿಗೆ ಎನ್‌ಎಂಪಿಟಿ ಕಾಂಪೌಂಡ್ ಒಳಗೆ ಬರುತ್ತವೆ. ಅನಿಮಲ್ ಕೇರ್ ಸಂಸ್ಥೆಗಳ ನೆರವಿನೊಂದಿಗೆ ಇವುಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಬಂದರು ಸಮೀಪದ ರಸ್ತೆಯಲ್ಲಿ ಇದ್ದ ನೀರು ಕುಡಿದ ಕೆಲವು ದನಗಳು ಮೃತಪಟ್ಟ ಘಟನೆ ವರ್ಷದ ಹಿಂದೆ ನಡೆದಿತ್ತು. ಲಾರಿಯಲ್ಲಿ ಇದ್ದ ವಿಷಕಾರಿ ರಾಸಾಯನಿಕ ವಸ್ತು ಮಿಶ್ರಣಗೊಂಡ ಕಾರಣ ಆ ಸಾವು ಸಂಭವಿಸಿತ್ತು. ಅಧಿಕಾರಿಯೋರ್ವರ ಮಾಹಿತಿ ಪ್ರಕಾರ ಈ ಮಾಲೀಕರಿಲ್ಲದ ದನಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಪ್ರಸ್ತಾವನೆ ಕೇಂದ್ರ ಸರ್ಕಾರ ತನಕ ಕೂಡ ಹೋಗಿತ್ತು. ಆದರೆ ಇದು ಕೇಂದ್ರ ಮಟ್ಟದಲ್ಲಿ ಪರಿಹಾರವಾಗಬೇಕಾದ ವಿಷಯವಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನೊಂದಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉತ್ತರದೊಂದಿಗೆ ಪ್ರಸ್ತಾವನೆ ತಿರಸ್ಕೃತಗೊಂಡಿದೆ.
-----ಕ್ವೋಟ್-----
ದೈತ್ಯ ಗಾತ್ರದ ಈ ದನ ಮತ್ತು ಹೋರಿಗಳಿಗೆ ಸಂಬಂಧಿಸಿ ಸಾಮಾನ್ಯವಾಗಿ ಕೂಳೂರಿನಿಂದ ಬೈಕಂಪಾಡಿ ಭಾಗದ ತನಕದ ಜನರು ಹಾಗೂ ಎನ್‌ಎಂಪಿಟಿ ಅಧಿಕಾರಿಗಳಿಂದ ಪ್ರತಿ ವಾರ ಕೆಲವು ಫೋನ್‌ಗಳು ಬರುತ್ತವೆ. ಇಲ್ಲಿಯ ತನಕ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅದು ಸುಲಭವೂ ಅಲ್ಲ. ಯಾಕೆಂದರೆ ಈ ಗೋವುಗಳು ಜನರ ನೇರ ಸಂಪರ್ಕವಿಲ್ಲದೆ ಕಾಡು ಪ್ರಾಣಿಗಳಂತೆಯೇ ಬೆಳೆದಿದೆ. ಇತ್ತೀಚೆಗೆ ಕೂಡ ಕಾಲು ಕಡಿದ ದನವೊಂದಕ್ಕೆ ಚಿಕಿತ್ಸೆ ಮಾಡಿ ಬಂದಿದ್ದೇನೆ.
ತೌಸಿಫ್ ಅಹಮ್ಮದ್
ಅನಿಮಲ್ ಕೇರ್ ಟ್ರಸ್ಟ್
(ಫೋಟೋ ಇದೆ)
((( ಕ್ವೋಟ್
ಪಣಂಬೂರು, ಆಸುಪಾಸಿನ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರು ಹಾಗೂ ಪಾದಚಾರಿಗಳು ಇಲ್ಲಿ ಅಡ್ಡಾಡುವ ಮಾಲೀಕರಿಲ್ಲದ ಎತ್ತು, ಕೋಣ, ದನಗಳಿಂದ ತೊಂದರೆಗೆ ಸಿಲುಕುವಂಥ ಘಟನೆಗಳು ಮರುಕಳಿಸುತ್ತಿವೆ. ಪರಿಣಾಮ ಅನೇಕ ಅಪಘಾತಗಳು ಸಂಭವಿಸಿವೆ. ಪ್ರಾಣ ಹಾನಿ ಸಂಭವಿಸಿದ ದೃಷ್ಟಾಂತಗಳು ಇವೆ. ಗಾಯಗೊಂಡವರು ಅನೇಕ ಮಂದಿ ಇದ್ದಾರೆ. ವಾಹನಗಳು ಹಾನಿಯಾಗಿವೆ. ಈ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಅಗತ್ಯ.
ಮಹಮ್ಮದ್ ಶರೀಫ್,
ಸರ್ಕಲ್ ಇನ್ಸ್‌ಪೆಕ್ಟರ್, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆ.
ಫೋಟೋ: ಎಂಎನ್‌ಜಿ- ಡಿಇಸಿಇ 19- ಸ್ಟ್ರೀಟ್ ಕೌ
ನವಮಂಗಳೂರು ಬಂದರು ಸಮೀಪ ರಾಷ್ಟ್ರೀಯ ಹೆದ್ದಾರಿ ಆಸುಪಾಸು ಅಡ್ಡಾಡುವ ದನ.
ಫೋಟೋ: ಎಂಎನ್‌ಜಿ- ಡಿಇಸಿಇ 19- ತೌಸಿಫ್ ಅಹಮ್ಮದ್
ತೌಸಿಫ್ ಅಹಮ್ಮದ್