ಡಿಸಿ ಕಚೇರಿ ಆವರಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಧರಣಿ

0101
Published on

ಬೆಳಗಾವಿ: ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟಿಸಿ, ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಇಲ್ಲದೆ ಆರ್ಥಿಕ ಸಂಕಷ್ಟದ ಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸೌಲಭ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಬೀದಿಬಳಿ ವ್ಯಾಪಾರ ಮಾಡಲು ಅವಕಾಶ ನೀಡುತ್ತಿಲ್ಲ. ಹಾಗಾದರೆ ನಾವು ವ್ಯಾಪಾರ ಮಾಡುವುದಾದರೂ ಎಲ್ಲಿ? ಶೀಘ್ರ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಪಾಲಿಕೆ ಅಧಿಕಾರಿಗಳು ಕೋವಿಡ್-19 ನಿಯಂತ್ರಣದ ಹೆಸ ರಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿ ಕೊಡುತ್ತಿಲ್ಲ. ನಗರದ ಶನಿವಾರ ಕೂಟ್‌ನಲ್ಲಿ ಹಲವಾರು ವರ್ಷಗಳಿಂದ ಅನೇಕ ವ್ಯಾಪಾರಿಗಳು ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಬೇರೆ ಕಡೆ ತೆರಳಿ ವ್ಯಾಪಾರ ಮಾಡುವಂತೆ ಆದೇಶಿಸಿದ್ದಾರೆ.

ಏಕಾಏಕಿ ಬೇರೆ ಕಡೆ ಹೋಗು ಎಂದರೆ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು? ಅಧಿಕಾರಿಗಳು ನಮ್ಮ ಕಷ್ಟ ಅರಿತು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಸರಸ್ವತಿ ಜಾಧವ, ಲಕ್ಷ್ಮೀ ಸೈಬನ್‌ವರ, ಲಗಮವ್ವ ದಾಸನಟ್ಟಿ, ರಾಯಪ್ಪ ಶಾಪುರಕರ, ರೇಣುಕಾ ವಂಟಮೂರಿ, ಶಾಂತವ್ವ ವಂಟಮೂರಿ, ಪ್ರಕಾಶ ತಿಪ್ಪಣ್ಣವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net