ಹೊಳೆ ನುಂಗಿದ ಬೆಳೆಗೆ ಬಿಡಿಗಾಸು !

26 DVD 05
ಕೃಷ್ಣಾನದಿ ನೆರೆಯಿಂದ ಕೋಣಚಪ್ಪಳಿ ಗ್ರಾಮದಲ್ಲಿ ಹತ್ತಿ, ತೊಗರಿ ಬೆಳೆಗೆ ಹೊಳೆನೀರು ನುಗ್ಗಿರುವುದು.(ಸಂಗ್ರಹಚಿತ್ರ)
Published on

ಅಮರೇಶ ಚಿಲ್ಕರಾಗಿ ದೇವದುರ್ಗ

ಮುಂಗಾರು ಹಂಗಾಮಿನಲ್ಲಿ ಕೃಷ್ಣಾ ನದಿಯಿಂದ ನೆರೆಹಾವಳಿಗೆ ತುತ್ತಾದ ತಾಲೂಕಿನ ರೈತರಿಗೆ ಬಿಡಿಗಾಸಿನ ಪರಿಹಾರ ಜಮೆ ಮಾಡಿದ್ದು ಅನ್ನದಾತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ಮಾನದಂಡ ಪ್ರಕಾರವೂ ಬೆಳೆ ಪರಿಹಾರ ನೀಡಿಲ್ಲ. ಕೃಷ್ಣಾ ನದಿದಂಡೆ ಸುಮಾರು 25ಗ್ರಾಮಗಳ 467ಕ್ಕೂ ಹೆಚ್ಚು ರೈತರಿಗೆ 3ರಿಂದ 5ಸಾವಿರ ರೂ.ಯಂತೆ ಪರಿಹಾರ ನೀಡಲಾಗಿದೆ.

ಜುಲೈ ಕೊನೆ ಹಾಗೂ ಆಗಸ್ಟ್ ಮಧ್ಯದವರೆಗೆ ಕೃಷ್ಣಾನದಿ ಸುಮಾರು 3.5ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹೊತ್ತುಸಾಗಿತ್ತು. ಇದರಿಂದ ತಿಂಥಣಿ ಬ್ರಿಡ್ಜ್‌ನಿಂದ ಗೂಗಲ್‌ವರೆಗೆ ಸುಮಾರು 57ಕಿಮೀ ಹರಿಯುವ ಕೃಷ್ಣೆ 25ಕ್ಕೂ ಹೆಚ್ಚು ಗ್ರಾಮಗಳ ಒಂದು ಸಾವಿರ ಎಕರೆಗೂ ಅಧಿಕ ಭೂಪ್ರದೇಶಕ್ಕೆ ನುಗ್ಗಿತ್ತು. ನಾಟಿ ಮಾಡಿದ್ದ ಭತ್ತ, ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಮೆಣಸಿನಕಾಯಿ ಸೇರಿ ವಿವಿಧ ಬೆಳೆಗಳು ಕೊಚ್ಚಿಹೋಗಿದ್ದವು.

ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ಮೆಣಸಿನಕಾಯಿ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ಬೆಳೆಹಾನಿ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದವು. ಕಂದಾಯ, ಕೃಷಿ ಇಲಾಖೆ ಜಂಟಿ ಪ್ರಕಾರ ಸುಮಾರು 467ರೈತರ ಅಂದಾಜು 444.28ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿದ್ದವು. ಸರ್ಕಾರದ ಮಾನದಂಡ ಪ್ರಕಾರ ನೀರಾವರಿ ಪ್ರದೇಶದಲ್ಲಿ ಪ್ರತಿಹೆಕ್ಟೇರ್‌ಗೆ 17,000ರೂ., ಮಳೆ ಆಶ್ರೀತ ಪ್ರದೇಶಕ್ಕೆ 8,500ರೂ. ಪರಿಹಾರ ನೀಡಲು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ನವೆಂಬರ್ ಮೊದಲ ವಾರದಿಂದ ರೈತರ ಜಮೀನಿಗೆ ಪರಿಹಾರ ಹಣ ಜಮಾ ಮಾಡಲಾಗಿದ್ದು, ಕೇವಲ 3ರಿಂದ 5ಸಾವಿರ ರೂ. ಪರಿಹಾರ ಜಮೆ ಮಾಡಲಾಗಿದೆ. ಕೊಪ್ಪರ ಗ್ರಾಮದ ಭೀಮಶಂಕರಗೌಡ ಪಾಟೀಲ್‌ಗೆ 3ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ನೆರೆಯಿಂದ ಬೆಳೆ ಕೊಚ್ಚಿಹೋಗಿದ್ದು 50ಸಾವಿರ ರೂ.ಗೂ ಅಧಿಕ ಖರ್ಚು ಮಾಡಿದ್ದರು. ಆದರೆ, ಕೇವಲ 3,315ರೂ. ಪರಿಹಾರ ಜಮೆ ಆಗಿದೆ.

ಇದೆ ಗ್ರಾಮದ ಇನ್ನೊಬ್ಬ ರೈತ ರುದ್ರಪ್ಪ 2ಎಕರೆಯಲ್ಲಿ ಭತ್ತ ನಾಡಿಮಾಡಿದ್ದರು. ಇವರಿಗೆ 5,950ರೂ. ಜಮೆ ಮಾಡಿದ್ದಾರೆ. ಇದೇ ರೀತಿ ಕೊಪ್ಪರ, ಕೋಣಚಪ್ಪಳಿ, ದೊಂಡಂಬಳಿ, ಹೂವಿನಹೆಡಗಿ, ಜೋಳದಹೆಡಗಿ, ನಿಲವಂಜಿ, ಲಿಂಗದಹಳ್ಳಿ, ಚಿಂಚೋಡಿ, ಗೂಗಲ್ ಸೇರಿ ಹಲವು ಹಳ್ಳಿಗಳ ರೈತರಿಗೆ ಅವೈಜ್ಞಾನಿಕ ಬೆಲೆ ಪರಿಹಾರ ನೀಡಲಾಗಿದೆ. ಬೆಳೆಹಾನಿ ದಾಖಲೆ ತೆಗೆಸಿಕೊಡಲು 1,000-1,500ರೂ. ಖರ್ಚು ಆಗಿವೆ. ಆದರೆ ಸರ್ಕಾರ 3ರಿಂದ 5ಸಾವಿರ ಪರಿಹಾರ ನೀಡಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಾವಿರ ಎಕರೆ ಬೆಳೆಹಾನಿ ಕೃಷ್ಣಾನದಿಗೆ ಸುಮಾರು 3.5ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ನದಿದಂಡೆ ಗ್ರಾಮದ 25ಕ್ಕೂ ಹೆಚ್ಚು ಹಳ್ಳಿಗಳ ರೈತರ ಸುಮಾರು ಒಂದು ಸಾವಿರ ಎಕರೆ ಪ್ರದೇಶಕ್ಕೆ ನೀರು ನುಗ್ಗಿತ್ತು. ಕಂದಾಯ, ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಿತ್ತು. 467ರೈತರ ಸುಮಾರು 444.28ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. 118.20 ಹೆಕ್ಟೇರ್ ಭತ್ತ, 39.92ಹೆಕ್ಟೇರ್ ತೊಗರಿ, 286.6ಹೆಕ್ಟೇರ್ ಹತ್ತಿಸೇರಿ 444.28 ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿತ್ತು. ತೋಟಗಾರಿಕೆ ವ್ಯಾಪ್ತಿಯ ಮೆಣಸಿನಕಾಯಿ ಬೆಳೆ ನೂರಾರು ಎಕರೆಯಲ್ಲಿ ನಷ್ಟವಾಗಿತ್ತು. ಮಳೆ ಆಶ್ರೀತ ಪ್ರದೇಶದಲ್ಲಿ ಸುಮಾರು 344ಹೆಕ್ಟೇರ್‌ನಲ್ಲಿ ನೀರಾವರಿ ಆಶ್ರೀತ ಪ್ರದೇಶದಲ್ಲಿ 100ಹೆಕ್ಟೇರ್‌ನಲ್ಲಿ ಸುಮಾರು 50ಲಕ್ಷ ರೂ. ಬೆಳೆಹಾನಿಯಾಗಿದೆ. ತೋಟಗಾರಿಕೆ 50 ಸೇರಿ ಸುಮಾರು 1ಕೋಟಿ ರೂ.ಗೂ ಅಧಿಕ ಮೌಲ್ಯದ ಬೆಳೆಹಾನಿಯಾಗಿದೆ. ಆದರೆ, ಸರ್ಕಾರ ಬಿಡಿಗಾಸು ನೀಡಿದೆ.

ಮೂರು ಎಕರೆಯಲ್ಲಿ ಹತ್ತಿ ನಾಟಿ ಮಾಡಿದ್ದೇವೆ. ಸುಮಾರು 50ಸಾವಿರ ರೂ.ಗೂ ಅಧಿಕ ಖರ್ಚು ಮಾಡಿದ್ದೇವೆ. ಹೊಳೆ ನೀರು ನುಗ್ಗಿ ಬೆಳೆ ಸಂಪೂರ್ಣ ಕೊಚ್ಚಿಹೋಗಿತ್ತು. 3ಎಕರೆಗೆ ಕೇವಲ 3,315ರೂ. ಪರಿಹಾರ ಜಮೆ ಮಾಡಿದ್ದಾರೆ. ನಾವು ದಾಖಲೆ ತೆಗೆಸಲು 1,500ರೂ. ಖರ್ಚು ಮಾಡಿದ್ದೇವೆ. ಯಾರನ್ನು ಪರಿಹಾರ ಕೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಭೀಮಶಂಕರಗೌಡ ಪಾಟೀಲ್ ಕೊಪ್ಪರ ಗ್ರಾಮದ ರೈತ ಕಂದಾಯ ಇಲಾಖೆ ಜತೆ ಸೇರಿ ಬೆಳೆಹಾನಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದೇವೆ. ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆ ಆಗಿದೆ. ನಮಗೆ ಇದರ ಬಗ್ಗೆ ಮಾಹಿತಿ ಇರಲ್ಲ. ನದಿದಂಡೆಯಲ್ಲಿ 467ರೈತರ ಸುಮಾರು 444ಹೆಕ್ಟೇರ್ ಬೆಳೆಹಾನಿಯಾಗಿತ್ತು. ತೊಗರಿ, ಹತ್ತಿ, ಭತ್ತದ ಬೆಳೆಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಶ್ರೀನಿವಾಸ್ ನಾಯಕ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ದೇವದುರ್ಗ ಸರ್ಕಾರದ ಮಾನದಂಡ ಪ್ರಕಾರ ಮಳೆ ಆಶ್ರೀತ ಪ್ರದೇಶಕ್ಕೆ ಪ್ರತಿಎಕ್ಟೇರ್‌ಗೆ 8,500ರೂ., ನೀರಾವರಿ ಪ್ರದೇಶದಲ್ಲಿ 17,000ರೂ. ಪರಿಹಾರ ನಿಗದಿ ಮಾಡಲಾಗಿದೆ. ಬೆಳೆಹಾನಿ ಸಮೀಕ್ಷೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ. ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆ ಹಾನಿಯ ಮೇಲೆ ಪರಿಹಾರ ಜಮೆ ಆಗಿರುತ್ತೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಚನ್ನಮಲ್ಲಪ್ಪ ಘಂಟಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net