

ರಾಯಬಾಗ: ಪಟ್ಟಣದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಗುರುವಾರ ಸುಮಾರು 200ಕ್ಕೂ ಹೆಚ್ಚು ನಾಯಿಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದಾರೆ.
ಇತ್ತೀಚಿಗೆ ಪಟ್ಟಣದ ಅನೇಕ ಬೀದಿಗಳಲ್ಲಿ ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದ್ದವು. ಇದರಿಂದ ಮಕ್ಕಳು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಪೌರಕಾರ್ಮಿಕರು ಬೀದಿನಾಯಿ ಹಿಡಿದು, ವಾಹನದಲ್ಲಿ ಸಾಗಿಸಿದ್ದಾರೆ.
ಇನ್ನುಳಿದ ಎಲ್ಲ ಬೀದಿನಾಯಿಗಳನ್ನು ಕಾರ್ಯಾಚರಣೆ ನಡೆಸಿ ಹಿಡಿಯಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ತಿಳಿಸಿದರು.