

ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದಲ್ಲಿ ನಾಟಿ ಕೋಳಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು 12 ಕೋಳಿಗಳನ್ನು ಅರ್ಧಂಬರ್ಧ ತಿಂದು ಬಿಟ್ಟಿವೆ. ಈ ಸಂಬಂಧ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ದೂರು ನೀಡಲಾಗಿದೆ.
ಹುಣಸೋಡು ಗ್ರಾಮದಲ್ಲಿ ನಿಂಗಮ್ಮ ಎಂಬುವವರು 30 ನಾಟಿ ಕೋಳಿಗಳನ್ನು ಸಾಕಿದ್ದರು. ಎಂದಿನಂತೆ ಮನೆ ಹಿತ್ತಲಿನಲ್ಲಿ ಮೇಯಲು ಬಿಟ್ಟಿದ್ದು ಶುಕ್ರವಾರ ಮಧ್ಯಾಹ್ನ ನಾಯಿಗಳು ಕಾಂಪೌಂಡ್ ಹಾರಿ ಬಂದು ದಾಳಿ ಮಾಡಿ ನಾಟಿ ಕೋಳಿಗಳನ್ನು ತಿಂದು ಹಾಕಿವೆ.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇಂದು ಕೋಳಿಗಳ ಮೇಲೆ ದಾಳಿ ಮಾಡಿರುವ ನಾಯಿಗಳು ಮುಂದೆ ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡಬೇಕಿದೆ ಎಂದು ಪಿಡಿಒಗೆ ಗ್ರಾಮದ ನಿಂಗಮ್ಮ ಎಂಬುವವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.