

ಹೊಳೆನರಸೀಪುರ: ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಪಟ್ಟಣದ ಬಿಎಂ ರಸ್ತೆ, ಪೇಟೆ ಮುಖ್ಯರಸ್ತೆ, ಕೋಟೆ ಮುಖ್ಯರಸ್ತೆ, ನರಸಿಂಹನಾಯಕ ನಗರ, ಚಿಕನ್ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಗುಂಪು, ಗುಂಪಾಗಿ ಓಡಾಡುವ ನಾಯಿಗಳು ಕೆಲವೊಮ್ಮೆ ಬೊಗಳುತ್ತಾ, ಕೆಲವೊಮ್ಮೆ ಕಚ್ಚಾಡುತ್ತಾ ಪಟ್ಟಣದಲ್ಲಿ ಆತಂಕ ಮೂಡಿಸಿವೆ. ಓಡಿಸಲು ಯತ್ನಿಸಿದರೆ ಒಟ್ಟಾಗಿ ದಾಳಿಗೆ ಮುಂದಾಗುತ್ತಿವೆ.
ಕೆಲವು ದಿನಗಳ ಹಿಂದೆ ನರಸಿಂಹನಾಯಕ ನಗರ ಬಡಾವಣೆಯಲ್ಲಿ ನಾಯಿಗಳ ಹಿಂಡು ಬಾಲಕನೊಬ್ಬನ ಮೇಲೆ ದಾಳಿ ನಡೆಸಲು ಮುಂದಾಗಿದ್ದವು. ಈ ವೇಳೆ ಅಕ್ಕಪಕ್ಕದ ಜನರು ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದರು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯೂ ಪ್ರಕಟವಾಗಿತ್ತು. ವರದಿ ನೋಡಿದ ನಂತರವೂ ಪುರಸಭೆಯವರು ನಾಯಿಗಳನ್ನು ಹಿಡಿಸಲು ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪುರಸಭೆಯವರು ನಾಯಿಗಳನ್ನು ಹಿಡಿಯಲು ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ, ನಾಯಿ ಹಿಡಿಸಿ ಜನರನ್ನು ರಕ್ಷಿಸಿ ಎಂಬ ಆಂದೋಲನ ಪ್ರಾರಂಭಿಸುತ್ತೇವೆ ಎಂದು ಜನಸ್ಪಂದನ ವೇದಿಕೆಯ ಸದಸ್ಯರು ಎಚ್ಚರಿಸಿದ್ದಾರೆ.