

ಮುಂಡರಗಿ: ಮನೆಯ ಮುಂದೆ ಆಟವಾಡುತ್ತ ಕುಳಿತಿದ್ದ ಐದು ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿ ಕಾಲಿಗೆ ಕಚ್ಚಿದ ಘಟನೆ ಪಟ್ಟಣದ ಜಾಗೃತ ಸರ್ಕಲ್ ಭಾಗದ ಗೋಂಧಳಿ ಓಣಿಯಲ್ಲಿ ಮಂಗಳವಾರ ನಡೆದಿದೆ.
ಗೋಂಧಳಿ ಓಣಿಯ ಐದು ವರ್ಷದ ಮಂಜುನಾಥ ಕಾಕಡೆ ಗಾಯಗೊಂಡ ಮಗು. ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಾಗ ಏಕಾಏಕಿ ಬಂದ ಬೀದಿನಾಯಿಯು ಮಗುವಿನ ಮೇಲೆ ಎಗರಿ ಕಾಲಿಗೆ ಕಚ್ಚಿದೆ. ಮಗುವಿನ ತಂದೆ, ತಾಯಿ ಕೆಲಸಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇರಲಿಲ್ಲ. ಆತನ ಅಕ್ಕ ಮನೆ ಮುಂದೆ ಆಟವಾಡುತ್ತಿದ್ದಳು. ನಾಯಿ ಕಚ್ಚಿದ ತಕ್ಷಣವೇ ಮಗು ಕೂಗಾಡಿದಾಗ ಪಕ್ಕದಲ್ಲಿದ್ದ ಸ್ಥಳೀಯರಿಬ್ಬರು ಬೀದಿನಾಯಿ ಓಡಿಸಿದ್ದಾರೆ. ನಂತರ ಮನೆಗೆ ಆಗಮಿಸಿದ ತಂದೆ-ತಾಯಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಜಾಗೃತ್ ಸರ್ಕಲ್‌ನಲ್ಲಿ ಮಾಂಸದ ಅಂಗಡಿಗಳು ಹೆಚ್ಚು ಇರುವುದರಿಂದ ಈ ಭಾಗದಲ್ಲಿ ಬೀದಿನಾಯಿಗಳ ಹಿಂಡು ದಿನವೀಡಿ ಬೀಡು ಬಿಟ್ಟಿರುತ್ತವೆ. ಇದರಿಂದ ಮಕ್ಕಳಿಗೆ, ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಮಗುವಿನ ಮೇಲೆ ನಾಯಿ ದಾಳಿ ಮಾಡಿದ್ದು, ಸ್ಥಳೀಯರು ಗಮನಿಸಿ ರಕ್ಷಿಸಿದ್ದಾರೆ. ಇನ್ನಾದರೂ ಸ್ಥಳೀಯ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬೀದಿನಾಯಿ ಹಾವಳಿ ತಪ್ಪಿಸಬೇಕು ಎಂದು ಗೋಂಧಳಿ ಓಣಿ ನಿವಾಸಿ ಯಲ್ಲಪ್ಪ ಗಣಾಚಾರಿ ಮೊದಲಾದವರು ಒತ್ತಾಯಿಸಿದ್ದಾರೆ.