

ಚಿತ್ರದುರ್ಗ: ಬೀದಿ ನಾಯಿ ದಾಳಿ ಹಾಗೂ ಕಡಿತ ಪ್ರಕರಣಗಳ ನಿಯಂತ್ರಣ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಜಿಲ್ಲಾ ಕಣ್ಗಾವಲು ಸಮಿತಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಅನುಷ್ಠಾನಗೊಳಿಸುವ ಹೊಣೆ ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಜವಾಬ್ದಾರಿಯಾಗಿದೆ.
ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿವೆ. ಚಿತ್ರದುರ್ಗ ನಗರದಲ್ಲೆ 5000ಕ್ಕೂ ಅಧಿಕ ಬೀದಿ ನಾಯಿಗಳಿವೆ. ರಾತ್ರಿ ವೇಳೆ ಜನರನ್ನು ಕಚ್ಚುತ್ತಿವೆ. ರಸ್ತೆಗಳು, ಸರ್ಕಾರಿ ಕಚೇರಿ ಆವರಣಗಳು ಬೀದಿನಾಯಿಗಳ ಆಶ್ರಯ ತಾಣಗಳಾಗುತ್ತಿವೆ. ತಕ್ಷಣ ನಗರಸಭೆ ಅಧಿಕಾರಿಗಳು ಅವುಗಳ ಸಂಖ್ಯೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಡಿಸಿ ಹೇಳಿದರು.
ವಾಂತಿಬೇಧಿ, ಚಿಕ್ಯೂನ್‌ಗುನ್ಯಾ, ಡೆಂೆ, ಮಲೇರಿಯಾ, ಇಲಿ, ಹಂದಿ, ಮೆದುಳು ಜ್ವರ, ಗಂಟಲು ಮಾರಿ, ದಡಾರ, ರೇಬಿಸ್, ಹಾವು ಕಡಿತ, ಮಂಗನ ಕಾಯಿಲೆ ಸೇರಿದಂತೆ ಕಣ್ಗಾವಲು ಅಡಿ ಅಧಿಸೂಚಿಸಿದ ರೋಗಗಳ ಬಗ್ಗೆ ವೈದ್ಯಾಧಿಕಾರಿಗಳು ನಿಗಾ ಇರಿಸಬೇಕು. ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಪ್ರಾಣಿ ಜನ್ಯರೋಗಳ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಿಸಿ ಸೂಚಿಸಿದರು.
ನಾಯಿ ಕಡಿತ ಹಾಗೂ ರೇಬಿಸ್ ರೋಗದ ನಿಯಂತ್ರಣ ಕುರಿತ ಜಾಗೃತಿ ಕರಪತ್ರವನ್ನು ಡಿಸಿ ಬಿಡುಗಡೆ ಮಾಡಿದರು.
ಡಿಎಚ್‌ಒ ಡಾ. ಜಿ.ಪಿ. ರೇಣುಪ್ರಸಾದ್, ಪ್ರಭಾರ ಎಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಂಬಾಳಿ ಮಠ, ಡಿಡಿಪಿಐ ಎಂ.ಆರ್. ಮಂಜುನಾಥ್, ಡಿಎಸ್ ಡಾ.ಎಸ್.ಪಿ. ರವೀಂದ್ರ, ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಎನ್. ಕಾಶಿ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಕುಮಾರ್ ಇತರರು ಇದ್ದರು.
ನಗರಸಭೆ ಅಧಿಕಾರಿಗಳ ವಿರುದ್ಧ ಡಿಎಸ್ ಅಸಮಾಧಾನ
ಜಿಲ್ಲಾಸ್ಪತ್ರೆ ಬಳಿಯ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಊಟ, ಆಹಾರ ಪೂರೈಕೆಯನ್ನೂ ಮಾಡಲಾಗುತ್ತಿದೆ. ಆದರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ, ನಾಯಿ, ಹೆಗ್ಗಣಗಳ ಕಾಟ ವಿಪರೀತವಾಗಿದೆ. ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ತ್ವರಿತ ಕ್ರಮಕ್ಕೆ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.