

ರಾಯಚೂರು ನಗರದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗಿದ್ದು, ನಗರದ ಮಂಗಳವಾರಪೇಟೆ ಬಡಾವಣೆಯಲ್ಲಿ 14 ಜನರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿವೆ.
ಗುರುವಾರ ಸಂಜೆ ಬೀದಿ ನಾಯಿಯೊಂದು ಏಕಾಏಕಿ ಜನರ ಮೇಲೆ ದಾಳಿ ನಡೆಸಿದೆ. ಸಾರ್ವಜನಿಕರ ಕೈ, ಕಾಲು, ಮತ್ತು ದೇಹದ ಇತರೆ ಭಾಗಗಳ ಮೇಲೆ ದಾಳಿ ನಡೆಸಿ ಕಚ್ಚಿದ್ದು, ರಿಮ್ಸ್ ಆಸ್ಪತ್ರೆಯ ಮಾಹಿತಿ ಪ್ರಕಾರ 14 ಜನರು ಆಸ್ಪತ್ರೆಗೆ ಆಗಮಿಸಿ 8 ಜನರು ಚಿಕಿತ್ಸೆ ಪಡೆದು ಹೋಗಿದ್ದಾರೆ.ಉಳಿದ 6 ಜನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಲ್ಲಿರುವ ರೋಗಿಯ ಸಂಬಂಧಿಯೊಬ್ಬರ ಮಾಹಿತಿ ಪ್ರಕಾರ 25ಕ್ಕೂ ಹೆಚ್ಚಿನ ಜನರಿಗೆ ನಾಯಿ ಕಚ್ಚಿದ್ದು,
ಬಹುತೇಕ ಜನರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಅಂದ್ರೂನ್ ಕಿಲ್ಲಾ, ಬೇರೂನ್ ಕಿಲ್ಲಾ, ಎಲ್ಬಿಎಸ್ ನಗರ, ಮಂಗಳವಾರಪೇಟೆ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದ್ದು, ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಮಹಾನಗರ ಪಾಲಿಕೆ ಸೂಕ್ತ ಕ್ರಮ ವಹಿಸುವುದು ಅತ್ಯಗತ್ಯವಾಗಿದೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.