

ರಾಮಕಿಶನ್ ಕೆ.ವಿ. ಬೆಂಗಳೂರು
ನಗರದ ವಿವಿಧ ಭಾಗಗಳ ಪ್ರಮುಖ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನಸವಾರರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಏಕಾಏಕಿ ಎದುರಾಗುವ ದನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಗಾಯಗೊಳ್ಳುತ್ತಿರುವ ಟನೆಗಳು ಸಾಕಷ್ಟಿವೆ. ಇನ್ನು ಬೀದಿಬದಿ ವ್ಯಾಪಾರಿಗಳಂತೂ ಸ್ವಲ್ಪ ಮೈಮರೆತರೂ ಹಣ್ಣು&ತರಕಾರಿ ಜಾನುವಾರುಗಳ ಪಾಲಾಗುವ ಭೀತಿಯಿದೆ.
ಸರ್ಜಾಪುರ, ಬನಶಂಕರಿ, ಬಸವನಗುಡಿ, ಗಿರಿನಗರ, ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಎನ್.ಆರ್. ಕಾಲನಿ, ರಾಜಾಜಿನಗರ, ವಿಜಯನಗರ ಸೇರಿ ವಿವಿಧ ಭಾಗಗಳ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಬೀಡುಬಿಟ್ಟಿರುವುದು ಜಾಸ್ತಿ ಕಾಣಿಸುತ್ತದೆ. ಇನ್ನು ುಟ್ಪಾತ್ನಲ್ಲಿ ಅಡ್ಡಾಡುವಾಗ ಯಾವ ಕ್ಷಣದಲ್ಲಾದರೂ ಪಾದಚಾರಿಗಳ ಮೇಲೆರಗುವ ಅಪಾಯವಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಶ್ರೀದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಬಿಡಾಡಿ ದನಗಳ ಮಾಲೀಕರನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡುವುದರೊಂದಿಗೆ ದಂಡ ವಿಧಿಸುವ ಕೆಲಸವೂ ಆಗಬೇಕಾಗಿದೆ. ಮುಖ್ಯವಾಗಿ ರಸ್ತೆಯಲ್ಲಿ ಬೀಡು ಬಿಟ್ಟಿರುವ ಜಾನುವಾರುಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸ ಆಗಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಒತ್ತಾಯ. ಸರ್ಜಾಪುರ, ಬಸವನಗುಡಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಂಚಾರ ಪೊಲೀಸರಿಗೆ ಈ ದನಗಳನ್ನು ಓಡಿಸುವುದೇ ನಿತ್ಯದ ಕಾಯಕವಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ತುಂಬಿರುವ ಕಸದ ರಾಶಿಗಳೇ ಬಿಡಾಡಿ ದನಗಳ ಆಹಾರವಾಗಿದೆ. ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ ಮುಂತಾದೆಡೆ ಬೀಡಾಡಿ ದನಗಳ ಸಮಸ್ಯೆ ಹೆಚ್ಚಲು ಇದೂ ಒಂದು ಕಾರಣವೆಂದರೆ ತಪ್ಪಲ್ಲ. ಇತರೆ ದನಗಳ ಜತೆ ತ್ಯಾಜ್ಯ ಆಹಾರಗಳನ್ನು ಸೇವಿಸುವ ದೃಶ್ಯಗಳು ಮಾಮೂಲು. ಇದರಿಂದ ಪ್ಲಾಸ್ಟಿಕ್ ದನಗಳ ಹೊಟ್ಟೆ ಸೇರುತ್ತಿದ್ದು, ಇದು ಅವುಗಳಿಗೆ ಪ್ರಾಣಾಪಾಯ ತಂದೊಡ್ಡುತ್ತಿವೆ. ಕೆಲ ನಿವಾಸಿಗಳು ಮನೆಯ ಹಳಸಿದ ಆಹಾರ ನೀಡುತ್ತಿರುವುದು ಸಮಸ್ಯೆ ಹೆಚ್ಚಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ದೂರು.
ರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಬಿಡಾಡಿ ದನಗಳು ಅಪಾಯ ತಂದೊಡ್ಡಿದೆ. ಅದರಲ್ಲೂ ಬೀದಿ ದೀಪದ ಸಮಸ್ಯೆಯಿರುವ ರಸ್ತೆಗಳಲ್ಲಿ ದನಗಳು ಅಪಘಾತದ ಅಪಾಯವೊಡ್ಡಿವೆ. ಕೆಲವೊಮ್ಮೆ ರಸ್ತೆ ಮಧ್ಯವೇ ನಿದ್ರಿಸುತ್ತಿರುತ್ತವೆ. ಹೀಗಾಗಿ ಬಿಬಿಎಂಪಿ ತಂಡ ದನಗಳ ಕೊಂಬುಗಳಿಗೆ ರೇಡಿಯಂ ಅಥವಾ ರಿಫ್ಲೆಕ್ಟರ್ ಅಂಟಿಸುವ ಕೆಲಸ ಮಾಡಬೇಕು. ಇದರಿಂದ ಅಪಘಾತ ನಿಯಂತ್ರಿಸಬಹುದಾಗಿದೆ ಎಂಬುದು ವಾಹನ ಸವಾರರ ಸಲಹೆ.
ಸಾಕು ದನಗಳಷ್ಟೇ ಓಡಾಡಿಕೊಂಡಿದ್ದ ನಗರದಲ್ಲಿ, ಕಳೆದ ಎರಡು ತಿಂಗಳಿನಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ ಎಂಬುದು ಸಾರ್ವಜನಿಕರ ಮಾತು. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಭಾಗದಿಂದ ನಗರ ಪ್ರವೇಶಿಸುತ್ತಿರುವ ಬಿಡಾಡಿ ದನಗಳ ಸಂಖ್ಯೆ ಹೆಚ್ಚಿದೆ. ಬೆಂಗಳೂರು ಹಸಿರು ವಲಯವಾಗಿದ್ದು, ಆಹಾರ ಅರಸಿಕೊಂಡು ನಗರ ಪ್ರವೇಶಿಸುತ್ತಿವೆ. ಅಲ್ಲದೆ, ಗ್ರಾಮಂತರ ಜನರು ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ಹೊರಗೆ ಬಿಟ್ಟು ಬಿಡುತ್ತಿದ್ದಾರೆ. ಪಟ್ಟಣದಲ್ಲಿ ತ್ಯಾಜ್ಯ ಆಹಾರಗಳು ಅವುಗಳಿಗೆ ಸುಲಭವಾಗಿ ದಕ್ಕುತ್ತಿರುವುದು ಸಮಸ್ಯೆ ಬಿಗಡಾಯಿಸಲು ಕಾರಣ ಎಂದು ಪಶುಸಂಗೋಪನಾ ವೈದ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.