ಸಹಕಾರಿ ಸಂಘಗಳ ಉಳಿವಿಗೆ ತಂತ್ರಗಾರಿಕೆ ಅಗತ್ಯ

29KDR1
Published on

ಕಡೂರು: ತ್ಯಾಗ ಮತ್ತು ಸೇವಾ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಸಹಕಾರಿ ಸಂಘಗಳು ಉನ್ನತಿ ಪಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಗಿರಿಯಾಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬರಗಾಲ ಪೀಡಿತ ಪ್ರದೇಶದ ತಾಲೂಕಿನಲ್ಲಿ ಸಹಕಾರ ಸಂಘ ಷೇರುದಾರರ ಪ್ರೋತ್ಸಾಹದಿಂದ ಉತ್ತಮವಾಗಿ ಬೆಳವಣಿಗೆಯಾಗಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ತಾಲೂಕಿನ ಹಿರಿಮೆ ಹೆಚ್ಚಿಸಿದೆ ಎಂದರು.

ಪರಸ್ಪರ ಸಹಕಾರಿ ಮನೋಭಾವ ಮತ್ತು ಕಾರ್ಯನಿಷ್ಠೆಯಿಂದ ಈ ಸಂಘ ದೊಡ್ಡದಾಗಿ ಬೆಳೆದಿದೆ. ಸಹಕಾರಿ ಸಂಘ ಎಂದರೆ ಹಾವು ಏಣಿ ಆಟದಂತೆ. ಸಹಕಾರಿ ಸಂಘಗಳು ಉಳಿಯಲು ತಂತ್ರಗಾರಿಕೆ ಇರಬೇಕು. ಎಲ್ಲ ಇದ್ದೂ ಬಹಳಷ್ಟು ಸಂಘಗಳು ನಷ್ಟದಲ್ಲಿರುವ ಅಥವಾ ಮುಚ್ಚಿಹೋಗಿರುವ ಉದಾಹರಣೆಗಳಿವೆ. ಈ ಸಮಯದಲ್ಲಿ ಒಮ್ಮೆಯೂ ಚುನಾವಣೆ ನಡೆಸದೆ ಅವಿರೋಧವಾಗಿ ಆಡಳಿತ ಮಂಡಳಿ ರಚಿಸಿಕೊಂಡು ಬರುತ್ತಾ ಇಂದಿಗೂ ಕ್ರಿಯಾಶೀಲವಾಗಿರುವ ಈ ಸಂಘದ ಕಾರ್ಯಕ್ಷಮತೆ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಶ್ಲಾಸಿದರು.

ಶತಮಾನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ದೂರದೃಷ್ಟಿಯ ಮನೋಭಾವನೆ ಗಿರಿಯಾಪುರದ ಜನರಲ್ಲಿ ರಕ್ತಗತವಾಗಿದೆ. ರಚನಾತ್ಮಕವಾಗಿ ಯೋಚಿಸಿ ಕೆಲಸ ಮಾಡುವ ಜನರಿಂದ ಗ್ರಾಮಾಭಿವೃದ್ದಿಯಾಗುತ್ತಿದೆ. ಸಹಕಾರಿ ತತ್ವದಿಂದ ನೆಮ್ಮದಿ ಬದುಕು ಸಾಧ್ಯ. ನಮ್ಮ ಸಮಸ್ಯೆ ಕಸ್ತೂರಿರಂಗನ್ ವರದಿಯಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಊರುಗಳಲ್ಲಿದ್ದ ಗೋಮಾಳ ಈಗ ಅರಣ್ಯವಾಗಿದೆ. ಈ ಅಪಸವ್ಯಗಳನ್ನು ತಪ್ಪಿಸಲು ಕ್ಷೇತ್ರದ ಸಂಸದರು ದೆಹಲಿ ಮಟ್ಟದಲ್ಲಿ ಧ್ವನಿಯೆತ್ತಬೇಕು ಎಂದು ಸಂಸದ ಶ್ರೇಯಸ್ ಪಟೇಲ್‌ಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net