

ಪುರುಷೋತ್ತಮ ಪೆರ್ಲ ಕಾಸರಗೋಡು
ಪ್ರಗತಿಪರ ಕೃಷಿಕ, ಮೀಯಪದವು ‘ಚೌಟರ ತೋಟ’ದ ಡಾ.ಚಂದ್ರಶೇಖರ ಚೌಟ ಅವರು ತಮ್ಮ ಜಮೀನಿನಲ್ಲಿ ಬೆಳೆಸಿರುವ ಅಪಾರ ಪ್ರಮಾಣದ ರಂಬುಟಾನ್ ಕೃಷಿ ವಿಶಿಷ್ಟ ರೋಗದಿಂದ ಮಾಗುವ ಮುನ್ನವೇ ಉದುರುತ್ತಿದ್ದು, ಅಪಾರ ನಷ್ಟ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಬುಟಾನ್ ಕೃಷಿ ನಡೆಸುತ್ತಿರುವ ಡಾ.ಚೌಟ ಅವರು ತಮ್ಮ ಐದು ಎಕರೆ ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕ 25ರಿಂದ 30 ಟನ್‌ವರೆಗೆ ಪಡೆಯುತ್ತಿದ್ದ ಇಳುವರಿ, ಈ ಬಾರಿಯ ವಿಶಿಷ್ಟ ಕಾಯಿಲೆಯಿಂದಾಗಿ ಶೇ.80ರಷ್ಟು ಬೆಳೆ ಕುಸಿತವುಂಟಾಗಿದೆ.
ಚೌಟರ ತೋಟದ ರಂಬುಟಾನ್ ಗಣಮಟ್ಟ ಕಾಯ್ದುಕೊಂಡಿರುವುದರಿಂದ ದೇಶದ ವಿವಿಧ ಮಾರುಕಟ್ಟೆಗಳಿಗೆ ರವಾನೆಯಾಗುತ್ತಿದೆ. ಮುಖ್ಯವಾಗಿ ದ.ಕ. ಹಾಗೂ ಕೇರಳದ ಎರ್ನಾಕುಳಂನಲ್ಲಿ ಮಾರುಕಟ್ಟೆ ಕಂಡುಕೊಂಡಿರುವ ಚೌಟರು ಕಾಸರಗೋಡು, ಕಣ್ಣೂರು ಜಿಲ್ಲೆಗೂ ತಮ್ಮ ತೋಟದ ರಂಬುಟಾನ್ ರವಾನಿಸುತ್ತಿದ್ದಾರೆ.
ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅವರಿಗೆ ಮನವಿ ಮಾಡಿದ ತಕ್ಷಣ ವಿಜ್ಞಾನಿಗಳನ್ನು ತೋಟಕ್ಕೆ ಕಳುಹಿಸಿಕೊಟ್ಟಿದ್ದರೂ ರೋಗಕ್ಕೆ ಕಾರಣವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಬೆಂಗಳೂರಿನ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಿಂದಲೂ ಸಮರ್ಪಕ ಉತ್ತರ ಲಭಿಸಿಲ್ಲ ಎಂಬುದಾಗಿ ಡಾ.ಚೌಟ ವಿಷಾದ ವ್ಯಕ್ತಪಡಿಸಿದ್ದಾರೆ.
ತೋಟದಲ್ಲಿನ ರಂಬುಟಾನ್ ಬೆಳವಣಿಗೆಯಾಗಿ ಹಣ್ಣಾಗಲು ಒಂದು ತಿಂಗಳು ಬಾಕಿ ಉಳಿದಿರುವಂತೆ ಸಂಪೂರ್ಣ ಉದುರಿ ಹಾಳಾಗುತ್ತಿದೆ. ತೋಟದಲ್ಲಿ ಕಾಲಾಕಾಲಕ್ಕೆ ಮಣ್ಣು ತಪಾಸಣೆ ನಡೆಸಲಾಗುತ್ತಿದ್ದು, ಕೀಟಬಾಧೆ, ಇತರ ಯಾವುದೇ ರೋಗಬಾಧೆ ಪತ್ತೆಯಾಗದಿದ್ದರೂ ಈ ರೀತಿ ಬೆಳೆ ಹಾಳಾಗುವುದಕ್ಕೆ ಕಾರಣ ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಶ್ರಮಿಸಬೇಕಾದ ಅನಿವಾರ್ಯತೆಯಿದೆ. ಈ ಸಮಸ್ಯೆ ಕಾಸರಗೋಡಿಗೆ ಮಾತ್ರವಲ್ಲ ಕೇರಳ, ಕರ್ನಾಟಕದಲ್ಲೂ ಇದೆ ಎಂದು ತಿಳಿಸಿದ್ದಾರೆ.
ಕರೊನಾ ಲಾಕ್‌ಡೌನ್ ಕಾಲಘಟ್ಟದಲ್ಲಿ ಡಾ.ಚಂದ್ರಶೇಖರ ಚೌಟ ಮಾರುಕಟ್ಟೆ ಕಂಡುಕೊಳ್ಳಲಾಗದೆ 20 ಟನ್ನಿಗೂ ಹೆಚ್ಚು ರಂಬುಟಾನ್ ಹಾಳಾಗಿತ್ತು. ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದ ರಂಬುಟಾನ್‌ಗೆ ಈ ಕಾಲಘಟ್ಟದಲ್ಲಿ ಬೇಡಿಕೆ ಗಣನೀಯವಾಗಿ ಕುಸಿದಿತ್ತು.
ರಂಬುಟಾನ್ ಕೃಷಿ ಕಳೆದ 20-25 ವರ್ಷಗಳಿಂದ ನಮ್ಮೂರಿಗೆ ಪರಿಚಯವಾಗಿದೆ. ಆರಂಭದಿಂದಲೇ ರಂಬುಟಾನ್ ಬೆಳೆ ಬಗ್ಗೆ ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ನಡೆಸುತ್ತಿದ್ದೇನೆ. ವಾರ್ಷಿಕ 20ರಿಂದ 25 ಟನ್ ರಂಬುಟಾನ್ ಬೆಳೆ ಬರಬೇಕಾಗಿದ್ದಲ್ಲಿ, ಈ ಬಾರಿ 5ರಿಂದ 10 ಟನ್‌ವರೆಗೆ ಮಾತ್ರ ಫಸಲು ಲಭಿಸಿದೆ. ಈ ವಿಶೇಷ ರೋಗದ ಬಗ್ಗೆ ಕಾಸರಗೋಡು ಸಿಪಿಸಿಆರ್‌ಐ, ಬೆಂಗಳೂರಿನಲ್ಲಿರುವ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಐಐಎಚ್‌ಆರ್)ಕ್ಕೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಡಾ.ಚಂದ್ರಶೇಖರ ಚೌಟ ಚೌಟರ ತೋಟ, ಮೀಯಪದವು