ತೆಂಗಿನಮರಗಳಿಗೆ ವಿಚಿತ್ರ ರೋಗ: ಗರಿಗಳು ಒಣಗಿ ನಾಶ : ಕೃಷಿಕರಲ್ಲಿ ಆತಂಕ

tree
ಸತ್ತಿರುವ ತೆಂಗಿನ ಮರ.
Published on

ಕುಂಬಳೆ: ತೆಂಗಿನಮರಗಳಿಗೆ ಬಾಧಿಸತೊಡಗಿದ ವಿಚಿತ್ರ ರೋಗದಿಂದಾಗಿ ಕೃಷಿಕರು ತೀವ್ರ ಆತಂಕಿತರಾಗಿದ್ದಾರೆ. ಆರಂಭದಲ್ಲಿ ಗರಿಗಳು ಒಣಗುತ್ತಿದ್ದು, ಕೊನೆಗೆ ತೆಂಗಿನಮರದ ತುದಿ ಪೂರ್ಣವಾಗಿ ಒಣಗಿ ನಾಶಗೊಳ್ಳುತ್ತಿದೆ.

ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಬದಿ, ಹೊಳೆ ಸಮೀಪದಲ್ಲಿ ಹಲವು ತೆಂಗಿನಮರಗಳಿಗೆ ಈ ರೋಗ ಬಾಧಿಸಿದೆ. ಈ ಹಿಂದೆ ಬದಿಯಡ್ಕ, ಎಣ್ಮಕಜೆ, ಪುತ್ತಿಗೆ, ಕುಂಬಳೆ ಭಾಗದಲ್ಲಿ ಇದೇ ರೀತಿಯ ರೋಗ ಕಂಡುಬಂದಿತ್ತು. ತೆಂಗಿನ ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ಥಾಪಿಸಿದ ಸಿಪಿಸಿಆರ್‌ಐ ಪರಿಸರದಲ್ಲೇ ತೆಂಗಿನಮರಗಳಿಗೆ ರೋಗ ಬಾಧಿಸಿ ಸಾಯತೊಡಗಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಕಂಡುಬಂದಿರುವ ತೆಂಗು ಕ್ಷಯ ರೋಗಕ್ಕೆ ಹೆದ್ದಾರಿಯ ಕಾಮಗಾರಿ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಹೆದ್ದಾರಿ ಕಾಮಗಾರಿಗೆ ಭಾರಿ ಪ್ರಮಾಣದ ಮಣ್ಣು ಅಗೆತ ನಡೆದಿದೆೆ. ಜತೆಗೆ ಬೃಹತ್ ಮರಗಳಿಗೆ ಕೊಡಲಿಯೇಟು ಬಿದ್ದಿರುವುದರಿಂದ ತಾಪಮಾನ ಏರಿಕೆ ಕಂಡುಬಂದಿದೆ.

ಈ ಬಗ್ಗೆ ಪರಿಸರ ಅಧ್ಯಯನದ ಅಗತ್ಯವಿದೆ. ಒಳನಾಡುಗಳ ತೆಂಗು ಸಾಯುವ ರೋಗಕ್ಕೆ ಫಂಗಸ್ ಕಾರಣ ಎಂಬುವುದು ತಜ್ಞರ ಅಭಿಮತ. ಹೆಚ್ಚಿನ ಪ್ರಮಾಣದ ಮಳೆಯ ಕಾರಣ ಫಂಗಸ್ ಉತ್ಪತ್ತಿಯಾಗಿ ಕೊಳೆತಕ್ಕೆ ಕಾರಣವಾಗುತ್ತಿದೆ. ಇತರ ಮರಗಳಿಗೂ ವ್ಯಾಪಿಸಿ ಮರ ಸಾಯಲು ಕಾರಣವಾಗುತ್ತಿದೆ. ತೆಂಗು ಕೃಷಿಕರ ಆತಂಕಕ್ಕೆ ತಜ್ಞರ ಸಲಹೆ ಪಡೆಯಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲೇ ಇರುವ ಸಿಪಿಸಿಆರ್‌ಐ ತಜ್ಞರ ನಿರ್ದೇಶಾನುಸಾರ ತೆಂಗಿನ ರೋಗ ವಿಮುಕ್ತಿಗೆ ಕೃಷಿಕರು ಮುಂದಾಗಬೇಕು.

ತೆಂಗಿನ ಈ ವಿಚಿತ್ರ ರೋಗಕ್ಕೆ ಫಂಗಸ್ ಕಾರಣ. ಇದಕ್ಕೆ ವಿಶೇಷ ಆರೈಕೆ ಅಗತ್ಯ. ಈ ನಿಟ್ಟಿನಲ್ಲಿ ಸಿಪಿಸಿಆರ್‌ಐಯಲ್ಲಿ ಮಾಹಿತಿ ನೀಡಲಾಗುವುದು. ಕೃಷಿಕರು ಸಂಪರ್ಕಿಸಬಹುದು. ಮೊಗ್ರಾಲ್ ಪುತ್ತೂರು ಪ್ರದೇಶ ಸಹಿತ ರಾ.ಹೆದ್ದಾರಿ ಅಕ್ಕಪಕ್ಕದ ತೆಂಗಿನಮರಗಳ ನಾಶಕ್ಕೆ ಮಣ್ಣು ನಾಶ ಕಾರಣವೆಂದು ಪ್ರಾಥಮಿಕ ಸಂಶೋಧನೆಯಿಂದ ತಿಳಿದುಬಂದಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು. - ಡಾ.ವಿನಾಯಕ ಹೆಗಡೆ, ಸಸ್ಯ ಸಂರಕ್ಷಣಾ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net