ಕೆರೆಗಳಿಗೆ ಕೊಳಚೆನೀರು ಹರಿಸದಿರಲು ಎಸ್‌ಟಿಪಿ ಅಗತ್ಯ: ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ

lake visit
Published on

ಬೆಂಗಳೂರು: ಮಹಾನಗರದಲ್ಲಿರುವ ಬೃಹತ್ ಕೆರೆಗಳಿಗೆ ಕೊಳಚೆನೀರು ಹರಿಸುತ್ತಿರುವುದರಿಂದ ಅವುಗಳು ಅವಸಾನದತ್ತ ಸಾಗಿದ್ದು, ತ್ಯಾಜ್ಯ ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸುವ ಮೂಲಕ ಜಲ ಮೂಲಗಳನ್ನು ರಕ್ಷಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ, ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ರಾಜ್ ಸಂಸ್ಥೆಯ ಸ್ಥಾಯಿಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ತಿಳಿಸಿದರು.

ನಗರದ ಅತಿ ದೊಡ್ಡ ಕೆರೆಗಳಾದ ಎಲೆಮಲ್ಲಪ್ಪಶೆಟ್ಟಿ ಕೆರೆ, ವರ್ತೂರು ಕೆರೆ ಹಾಗೂ ಬೆಳ್ಳಂದೂರು ಕೆರೆಗಳ ಸ್ಥಿತಿಗತಿ ಅರಿಯಲು ಬುಧವಾರ ಸಮಿತಿಯು ಸ್ಥಳಪರಿಶೀಲನೆ ನಡೆಸಿತು. ಮೂರೂ ಕೆರೆಗಳು ಕಲುಷಿತಗೊಳ್ಳಲು ತ್ಯಾಜ್ಯ ನೀರೇ ಕಾರಣವಾಗಿದ್ದು, ಈವರೆಗೆ ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯ ಕಾರಣವೆಂದು ಅಧ್ಯಕ್ಷರು ಬೊಟ್ಟು ಮಾಡಿದರು.

ಎಸ್‌ಟಿಪಿ ಸ್ಥಾಪನೆ ಸಹಿತ ಕೆರೆ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು, ಒತ್ತುವರಿ ತೆರವುಗೊಳಿಸಲು ವಿಫಲ, ಇಲಾಖೆಗಳ ಮಧ್ಯ ಸಮನ್ವಯ ಕೊರತೆಯಿಂದ ದೊಡ್ಡ ಕೆರೆಗಳು ಸಮಸ್ಯೆಯ ಗೂಡಾಗಿವೆ. ಈವರೆಗೆ ಕೋಟ್ಯಂತರ ರೂ. ಖರ್ಚು ಮಾಡಿದರೂ, ಜಲ ಮೂಲಗಳು ಸ್ವಚ್ಛವಾಗದಿರುವುದು ವ್ಯವಸ್ಥೆಯಲ್ಲೇ ಲೋಪ ಆಗಿರುವಂತಿದೆ ಎಂದ ರಿಜ್ವಾನ್ ಅರ್ಷದ್, ಭವಿಷ್ಯದ ದೃಷ್ಟಿಯಿಂದ ಎಲ್ಲ ಇಲಾಖೆಗಳು ಒಟ್ಟಾಗಿ ಕೆರೆಗಳನ್ನು ಉಳಿಸಲು ಹೆಚ್ಚಿನ ಆಸ್ಥೆ ವಹಿಸಬೇಕು. ಇದಕ್ಕಾಗಿ ಸರ್ಕಾರದಿಂದ ಅಗತ್ಯ ಮಾರ್ಗಸೂಚಿ ಹೊರಡಿಸಲು ಶಿಾರಸು ಮಾಡಲಾಗುವುದು. ಜತೆಗೆ ಮುಂದಿನ ವಾರ ಸಮಿತಿ ಸಭೆ ನಡೆಸಿ ಕೆರೆ ಅಭಿವೃದ್ಧಿ ಬಗ್ಗೆ ನಿಶ್ಚಿತ ಕ್ರಮ ಕೈಗೊಳ್ಳಲು ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಎಸ್‌ಟಿಪಿ ಸ್ಥಾಪನೆಗೆ ಮೊದಲ ಆದ್ಯತೆ:

ನಗರದಲ್ಲಿ ಹೆಚ್ಚಿನ ಕೆರೆಗಳು ಮಲಿನಗೊಳ್ಳುತ್ತಿವೆ. ಕೆರೆ ಸುತ್ತ ಅಪಾರ್ಟ್‌ಮೆಂಟ್ ನಿರ್ಮಾಣ ಸಹಿತ ಜನವಸತಿಗೆ ತಡೆ ಹಾಕದಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಅಭಿವೃದ್ಧಿ ಜತೆಗೆ ಎಸ್‌ಟಿಪಿ ಸ್ಥಾಪನೆಗೆ ಮೊದಲ ಆದ್ಯತೆ ನೀಡಿದರೆ ಮೂಲದಲ್ಲೇ ತ್ಯಾಜ್ಯನೀರು ಕೆರೆಗಳಿಗೆ ಹರಿಯದಂತೆ ತಡೆಯಬಹುದಾಗಿದೆ. ಈ ಅಂಶವನ್ನು ಆಧರಿಸಿ ಕೆಲವೊಂದು ಶಿಫಾರಸನ್ನು ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಲಾಗುವುದು ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.

ಇದೇ ವೇಳೆ ಸಮಿತಿಯು ಬೊಮ್ಮನಹಳ್ಳಿ ಕ್ಷೇತ್ರದ ಅಗರ ಕೆರೆಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಈ ಮಾದರಿಯಲ್ಲೇ ಮಡಿವಾಳ ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಶಾಸಕ ಸತೀಶ್ ರೆಡ್ಡಿ ಮನವಿ ಮಾಡಿದರು.

ಸರ್ವೆಗೆ 10 ದಿನ ಗಡುವು:

ಪೂರ್ವ ತಾಲೂಕಿನ ಎಲೆಮಲ್ಲಪ್ಪಶೆಟ್ಟಿ ಕೆರೆ 260 ಎಕರೆ ವಿಸ್ತೀರ್ಣವಿದೆ. ಈ ಪೈಕಿ ಒತ್ತುವರಿ ಹೊರತುಪಡಿಸಿ ಉಳಿದ ಭಾಗಕ್ಕೆ ಈವರೆಗೆ 9.5 ಕಿ.ಮೀ. ಉದ್ದದಷ್ಟು ತಂತಿಬೇಲಿ ಅಳವಡಿಸಲಾಗಿದೆ. ಉಳಿದ 4.5 ಕಿ.ಮೀ. ಭಾಗಕ್ಕೆ ಬೇಲಿ ಹಾಕುವ ಮುನ್ನ ಸರ್ವೆಯನ್ನು 10 ದಿನದೊಳಗೆ ಪೂರ್ಣಗೊಳಿಸಿ ೆನ್ಸಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು. ಇದರ ಹೊರತಾಗಿಯೂ ಸಮಿತಿ ಭೇಟಿ ನಿಡಿದ ಸ್ಥಳದ ಬಲಿಯ ಬರ್ ವಲಯದಲ್ಲೇ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ಕೆಎಸ್‌ಪಿಸಿಬಿ ಅಧಿಕಾರಿಗೆ ತರಾಟೆ:

ವರ್ತೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 800 ಅಪಾರ್ಟ್‌ಮೆಂಟ್‌ಗಳಿದ್ದು, ಹೆಚ್ಚಿನವು ಎಸ್‌ಟಿಪಿ ಅಳವಡಿಸಿಕೊಂಡಿವೆ. ಆದರೆ, ಅವುಗಳ ಕಾರ್ಯನಿರ್ವಹಣೆ ಸರಿಯಾಗಿಲ್ಲದ ಕಾರಣ ತ್ಯಾಜ್ಯನೀರು ಕೆರೆಗೆ ಹರಿಯುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು. ಇದರಿಂದ ಸಿಟ್ಟಾದ ಸಮಿತಿ ಅಧ್ಯಕ್ಷರು, ಎಸ್‌ಟಿಪಿ ಅಳವಡಿಸಿಕೊಳ್ಳದವರಿಗೆ ನೋಟಿಸ್ ನೀಡಲಾಗಿದೆಯೆ, ಈವರೆಗೆ ಎಷ್ಟು ಮಂದಿಗೆ ನೋಟಿಸ್ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಅಧಿಕಾರಿಯು ಉತ್ತರ ನೀಡಲು ತಡಬಡಾಯಿಸಿದರು. 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಣದ ವೇಳೆ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬ ಉತ್ತರಕ್ಕೆ ಸಮಾಧಾನಗೊಳ್ಳದ ಸಮಿತಿ ಸದಸ್ಯರು ಮಂಡಳಿ ನಿಷ್ಕ್ರಿಯತೆಯೇ ಕೆರೆಗಳು ಮಲಿನಗೊಳ್ಳಲು ಕಾರಣವೆಂದು ಆಕ್ಷೇಪಿಸಿದರು.

ಬೆಳ್ಳಂದೂರು ಕೆರೆ ಪುನರುಜ್ಜೀವನ ಕೆಲಸ ಅರ್ಧದಷ್ಟು ಮುಗಿದಿದೆ. ಹೂಳೆತ್ತುವಿಕೆ, ತಂತಿಬೇಲಿ ಅಳವಡಿಕೆ, ಪ್ರವಾಹ ತಡೆ ಗೇಟ್ ಅಳವಡಿಸಲಾಗಿದೆ. ಒತ್ತುವರಿದಾರರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರೂ, ಈವರೆಗೂ ಜಾಗ ಖಾಲಿ ಮಾಡದ ಕಾರಣ ಸಮಸ್ಯೆ ಇದೆ. ಎಸ್‌ಟಿಪಿ ಸ್ಥಾಪನೆ ಹಾಗೂ ಮಳೆನೀರುಗಾಲುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಬೇಕಿದೆ ಎಂದು ಬಿಡಿಎ ಅಭಿಯಂತರ ಸದಸ್ಯರು ಸಮಿತಿಗೆ ತಿಳಿಸಿದರು. ಹಿಂದೆ ಉದ್ಭವಿಸಿದ್ದ ನೊರೆ ಸಮಸಮಸ್ಯೆ ನಿರಾರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಮಿತಿಯು, ಬಾಕಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸದಿರುವುದಕ್ಕೆ ಅತೃಪ್ತಿ ಹೊರಹಾಕಿತು. ಬಿಡಿಎ, ಬಿಬಿಎಂಪಿ, ಜಲಮಂಡಲಿ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಮಧ್ಯ ಸಮನ್ವಯ ಸಾಧಿಸಿ ಕೆಲಸ ಪೂರ್ಣಗೊಳಿಸುವಂತೆ ಸಮಿತಿ ಅಧ್ಯಕ್ಷರು ತಾಕೀತು ಮಾಡಿದರು.

ಪರಿಶೀಲನೆ ವೇಳೆ ಸಮಿತಿಯ ಸದಸ್ಯರಾದ ರವಿಸುಬ್ರಹ್ಮಣ್ಯ, ವೆಂಕಟಶಿವಾರೆಡ್ಡಿ, ಶಶಿಕಲಾ ಜೊಲ್ಲೆ, ಹರೀಶ್ ಪೂಂಜ, ಮೇಲ್ಮನೆ ಸದಸ್ಯರಾದ ರೆಡ್ಡಿ, ಗೋಪಿನಾಥ್ ರೆಡ್ಡಿ, ಡಿ.ಟಿ.ಶ್ರೀನಿವಾಸ್, ಗೋವಿಂದರಾಜ್, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಬಿ.ಕೆ.ಪವಿತ್ರ, ಬಿಡಿಎ ಅಭಿಯಂತರ ಸದಸ್ಯ ಡಾ. ಎಚ್.ಆರ್.ಶಾಂತರಾಜಣ್ಣ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಬೆಂಗಳೂರಿನ ಕೆರೆಗಳಲ್ಲಿ ಸಂಗ್ರಹಗೊಂಡಿರುವ ಮಲಿನ ನೀರನ್ನು ಶುದ್ಧೀಕರಿಸಿ ಕೋಲಾರ/ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಆರಂಭದಲ್ಲಿ ನೀಡಿದ್ದ ಭರವಸೆಯಂತೆ 2,3ನೇ ಹಂತದ ಶುದ್ಧೀಕರಣ ಕಾರ್ಯ ಸಮಪರ್ಕವಾಗಿ ನಡೆಯುತ್ತಿಲ್ಲ. ಜಿಲ್ಲೆಯ ಹಲವೆಡೆ ಕೃಷಿ, ಪಶುಗಳಿಗೆ ಸಮಸ್ಯೆ ಉಂಟಾಗಿದ್ದು, ರೋಗ ಬಾಧೆಗೂ ಅವಕಾಶ ಮಾಡಿಕೊಟ್ಟಿದೆ. ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಿಸಿ ನೀರು ಹರಿಸಲು ಸರ್ಕಾರ ಗಮನ ಹರಿಸಬೇಕು.

- ವೆಂಕಟಶಿವಾರೆಡ್ಡಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net