

ಮಂಡ್ಯ: ಆಧುನಿಕ ಪರಂಪರೆ ಯಾವುದಕ್ಕೂ ಕಡಿಮೆಯಿಲ್ಲದಂತೆ ವಿಜೃಂಭಿಸುತ್ತಿದೆ. ವಯಸ್ಸಾಯಿತು ನಮ್ಮ ಕಾಲ ಹೋಯಿತು ಎಂದಲ್ಲ. ಬದಲಿಗೆ ಬಹಳ ಚೆನ್ನಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆಂಬುದು ಸಂತಸದ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ 2024ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಕೃತಿಯ ಲೇಖಕ ಅನಿಲ್ ಗುನ್ನಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ, ಕಾವ್ಯ, ನಾಟಕ ಸೇರಿದಂತೆ ಎಲ್ಲ ಕಲಾಲೋಕದಲ್ಲಿ ಯುವ ಪಂಥ ವಿಜೃಂಭಿಸುತ್ತಿದೆ. ಈ ಸನ್ನಿವೇಶದಲ್ಲಿ ನಮ್ಮ ತಲೆಮಾರು ಒಳಗೊಂಡಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಂಪರೆಯ ಸಿಂಹಾವಲೋಕನ ಮಾಡಿ ನೋಡಿದರೆ, ಅದರ ಬೆಳವಣಿಗೆಗಳ ವಿವಿಧ ಘಟ್ಟಗಳನ್ನು ಗಮನಿಸಿದರೆ ಹಳಗನ್ನಡ ಹೋಯಿತು, ನಡುಗನ್ನಡ ಬಂತು, ಚಂಪೂಕಾವ್ಯ ಬಂತು, ರಗಳೆ, ಷಟ್ಪದಿ, ತ್ರಿಪದಿಗಳೆಲ್ಲ ಬಂದವು ಹೋದವು. ಆಧುನಿಕ ಕಾಲಘಟ್ಟದಲ್ಲಿ ನವ್ಯಪಂಥ ಹೋಯಿತು, ಪ್ರಗತಿಶೀಲ ಬಂತು, ಬಂಡಾಯ, ದಲಿತ ಎಲ್ಲ ಬಂತು ಈ ಎಲ್ಲವನ್ನು ನೋಡಿದ್ದ ನನ್ನ ತಲೆಮಾರಿನವರು ಈಗ ಯುವಕ ಯುವತಿಯರು ಬರೆಯುತ್ತಿರುವ ಪರಿಯನ್ನು ನೋಡುತ್ತಿದ್ದೇವೆ ಎಂದರು.
ಇತ್ತೀಚೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವ ರೀತಿಯನ್ನು ಗಮನಿಸಿದ್ದೇವೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ, ಸಾಹಿತ್ಯ ಗೋಷ್ಠಿಗಳು, ಸಂವಾದ ಮುಂತಾದ ಸಾಹಿತ್ಯಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಈ ಸಭಾಂಗಣದಲ್ಲಿ ನೆರೆದಿರುವಷ್ಟೇ ಸಂಖ್ಯೆಯ ಜನ ಇರುತ್ತಾರೆ. ಹಾಗಾಗಿ ಕಥಾಸಂಕಲನ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಕಾರ್ಯಕ್ರಮ ಸಾಹಿತ್ಯ ಸಮ್ಮೇಳದಂತೆಯೇ ಕಂಡುಬರುತ್ತಿದೆ ಎಂದು ಶ್ಲಾಸಿದರು.
ಸರಳ ಹಾಗೂ ಜನಭಾಷೆಯಲ್ಲಿ ಕಥೆಗಳನ್ನು ಬರೆಯುತ್ತಿದ್ದ ಬೆಸಗರಹಳ್ಳಿ ರಾಮಣ್ಣ ಅವರನ್ನು ನನಗೆ ಪರಿಚಯಿಸಿದ ಡಾ.ಹಾ.ಮಾ.ನಾಯಕ ಅವರು ರಾಮಣ್ಣನವರ ಬಗ್ಗೆ ಎಲ್ಲವನ್ನೂ ತಿಳಿಸಿದ್ದರು. ಹಾಗಾಗಿ ರಾಮಣ್ಣನವರ ಸಹವಾಸ ನನ್ನದಾಗಿತ್ತು. ಅವರು ಸರ್ಕಾರಿ ವೈದ್ಯರಾಗಿದ್ದ ವೇಳೆ ರಾಜ್ಯ ಸರ್ಕಾರ ಡಾ.ರಾಮಣ್ಣ ಅವರ ನೇತೃತ್ವದ ತಂಡವನ್ನು ಅಂದು ಬಿಹಾರ್ ರಾಜ್ಯದಲ್ಲಿ ಸಿಡುಬು ರೋಗದ ವಿರುದ್ಧ ಹೋರಾಡಲು ಕಳಿಸಿತ್ತು. ರಾಮಣ್ಣ ಅವರು ವೈದ್ಯರಾಗಿ ಸೇವೆ ಸಲ್ಲಿಸಿ ಬಂದವರೇ ಅವರೊಳಗಿದ್ದ ಸಾಹಿತಿ ಕಥೆಗಾರ ಜಾಗೃತಿಯಾಗಿದ್ದ. ಅದರ ಪರಿಣಾಮ ನಿರಂತರವಾಗಿ ಸಾಮಾಜಿಕ ರೋಗಕ್ಕೆ ತುತ್ತಾದ ಸಮುದಾಯಕ್ಕೆ ಚಿಕಿತ್ಸೆ ನೀಡಲು ಸಾಹಿತ್ಯದ ಶಸ ಹಿಡಿದು ನಿಂತರು. ಆದ್ದರಿಂದ ಅವರು ದಾಖಲಿಸಿರುವ ತಮ್ಮ ಅನುಭವವನ್ನು ರಾಮಣ್ಣನವರ ಪುತ್ರರಾದ ರವಿಕಾಂತೇಗೌಡರು ಒಂದು ಚಲನಚಿತ್ರ ಮಾಡಿದರೆ ಬೆಸಗರಹಳ್ಳಿ ರಾಮಣ್ಣ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತೆ ಎಂದು ಸಲಹೆ ನೀಡಿದರು.
ಸೀವಾದಿ ಚಿಂತಕಿ ಡಾ.ಎಚ್.ಎಸ್.ಶ್ರೀಮತಿ, ಪುರುಷ ಹಾಗೂ ಮಾತೃ ಪ್ರದಾನ ವ್ಯವಸ್ಥೆಯ ನಡುವಿನ ಹಲವು ಸ್ಥರಗಳ ಕುರಿತು ಬೆಳಕು ಚೆಲ್ಲಿದರಲ್ಲದೆ, ಪ್ರಸ್ತುತ ಮಹಿಳೆಯರ ಸಾಮಾಜಿಕ ತಲ್ಲಣಗಳು ಹಾಗೂ ಸಂವೇದನೆಗಳನ್ನು ಪ್ರಸ್ತಾಪಿಸಿದರು. ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕಿ ಡಾ.ಗೀತಾ ವಸಂತಾ ಅವರು ಪ್ರಶಸ್ತಿ ವಿಜೇತ ಕೃತಿ ‘ಸರ್ವೆ ನಂಬರ್-97’ ಕುರಿತು ಮಾತನಾಡಿದರು.
ಡಾ.ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ ಪೊಲೀಸ್ ಅಧಿಕಾರಿ ಡಾ.ರವಿಕಾಂತೇಗೌಡ, ಪ್ರತಿಷ್ಠಾನದ ಪೋಷಕಿ ಡಿ.ಪಿ.ರಾಜಮ್ಮ ರಾಮಣ್ಣ, ಅಧ್ಯಕ್ಷೆ ಎಚ್.ಆರ್.ಸುಜಾತಾ ಇತರರಿದ್ದರು. ಗಿಡಬಳ್ಳಿಗಳ ನೈಜ ಪರಿಸರದ ಸನ್ನಿವೇಶದಿಂದ ವಿಶಿಷ್ಠವಾಗಿ ಸಜ್ಜುಗೊಳಿಸಲಾದ ವೇದಿಕೆ ಗಮನಸೆಳೆಯಿತು. ಬಹುಮಾನಿತ ಕೃತಿಯ ಲೇಖಕ ಅನಿಲ್ ಗುನ್ನಾಪುರ ಅವರಿಗೆ 25 ಸಾವಿರ ರೂ.ನಗದು ಬಹುಮಾನದೊಂದಿಗೆ ಪ್ರಶಸ್ತಿ ಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆಲೆಮನೆ’ ಕೃತಿ ಬಿಡುಗಡೆ ವಿಶೇಷವಾಗಿ ನಡೆಯಿತು. ಆಲೆಮನೆಗಳಲ್ಲಿ ಬೆಲ್ಲವನ್ನು ಕಟ್ಟಲು ಬಳಸುವ ಕಬ್ಬಿನ ತರಗಿನಲ್ಲಿ ಆಲೆಮನೆ ಪುಸ್ತಕಗಳನ್ನು ಕಟ್ಟಿ, ಬುಟ್ಟಿಯಲ್ಲಿರಿಸಿ ಈ ಬುಟ್ಟಿಯನ್ನು ಆಲೆಮನೆ ಕೆಲಸಗಾರ ಪಟಾಪಟಿ ಚಡ್ಡಿ, ಪಂಚೆ, ಬನಿಯನ್ ಧರಿಸಿದ್ದ ವ್ಯಕ್ತಿ ವೇದಿಕೆಗೆ ತಂದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಶೇಷವಾಗಿ ವೇದಿಕೆಯಲ್ಲಿದ್ದ ಗಣ್ಯರಿಗೆೆ ಮಂಡ್ಯ ಸ್ಟೈಲ್ ಟವಲನ್ನು ಹೆಗಲಿಗೆ ಹಾಕಿ ಸ್ವಾಗತ ಕೋರಲಾಯಿತು.