

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಸುತ್ತಲಿನ ಕೇಡುಗಳನ್ನು ಗುರುತಿಸುತ್ತ ಲೇಖಕರು ಕತೆಗಳನ್ನು ಬಹಳ ಜವಾಬ್ದಾರಿಯಿಂದ ಬರೆಯಬೇಕು ಎಂದು ಕತೆಗಾರ ಡಾ. ಅಮರೇಶ ನುಗಡೋಣಿ ಹೇಳಿದರು.
ಬೆಂಗಳೂರಿನ ವೀರಲೋಕ ಪ್ರಕಾಶನ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಸಾಹಿತ್ಯ ಭವನದಲ್ಲಿ 2 ದಿನಗಳ ಕಾಲ ಏರ್ಪಡಿಸಿದ್ದ ದೇಸಿ ಕಥಾ ಕಮ್ಮಟಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಸಿಯತೆ ಎನ್ನುವುದು ಸ್ಥಳೀಯತೆ ಮತ್ತು ಜಾಗತಿಕತೆ ಒಳಗೊಂಡಿರುವುದನ್ನು ಇಂದಿನ ಹೊಸ ಲೇಖಕರು ತಿಳಿಯಬೇಕು. ಸುಳ್ಳು ಹೇಳುವವರು ತಮ್ಮದೇ ಸರಿ ಎಂದು ವಾದಿಸುವ ಜಗತ್ತಿನಲ್ಲಿ ಸತ್ಯದ ಮೌಲ್ಯಗಳಿಗಾಗಿ ಬರಹಗಾರರು ಶ್ರಮಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದರು.
ಹನುಮಂತ ಹಾಲಗೇರಿ ಮಾತನಾಡಿ, ಸಮಾಜದ ಬೇರೆ ಬೇರೆ ಸ್ತರಗಳ ಜನರ ಬವಣೆಗಳು ನಮ್ಮ ಕಥಾ ಸಾಹಿತ್ಯದಲ್ಲಿ ಅಭಿವ್ಯಕ್ತಿಯಾಗಬೇಕಾದ ಜರೂರು ಇದೆ. ಕನ್ನಡ ಕತೆಯ ವಿಕಾಸದಲ್ಲಿ ಕನ್ನಡ ನೆಲದ ಸಂಸ್ಕೃತಿಯ ಇತಿಹಾಸವಿದೆ ಎಂದರು.
ಕಥಾ ಕಮ್ಮಟದ ನಿರ್ದೇಶಕ ಡಾ. ಬಸು ಬೇವಿನಗಿಡದ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ಕನ್ನಡ ಕತೆಯ ಪ್ರಾದೇಶಿಕ ಹಾಗೂ ದೇಶಿ ಚಹರೆಗಳ ಕುರಿತು ಚನ್ನಪ್ಪ ಅಂಗಡಿ, ಕಥೆ ಕಟ್ಟುವ ಬಗೆಯ ಬಗ್ಗೆ ಡಾ. ಪ್ರಜ್ಞಾ ಮತ್ತಿಹಳ್ಳಿ, ಡಾ. ಆನಂದ ಪಾಟೀಲ ಮಾತನಾಡಿದರು. ಕೆಲ ಆಯ್ದ ಕತೆಗಳನ್ನು ಸುರೇಖಾ ಸುರೇಶ ಮತ್ತು ಶರಣಬಸವ ಚೋಳಿನ ಪ್ರಸ್ತುತಪಡಿಸಿದರು.
ಡಾ. ಅನುಸೂಯ ಕಾಂಬಳೆ, ಇತರರು ಇದ್ದರು. 50 ಜನ ಯುವ ಲೇಖಕರು ಶಿಬಿರದಲ್ಲಿ ಭಾಗವಹಿಸಿದ್ದರು. ರಾಖಿ ಹಾನಗಲ್ ನಿರೂಪಿಸಿದರು.