

ಸೋಮವಾರಪೇಟೆ: ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ.
ಕುಸೂಬೂರು ಗ್ರಾಮದ ಬಳಿಯಲ್ಲಿ ರಾಜ್ಯಹೆದ್ದಾರಿಗೆ ಬೆಳಗ್ಗೆ ಅಡ್ಡಲಾಗಿ ಮರಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಆಗ್ನಿಶಾಮಕ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಶಿರಂಗಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಯ ಮೇಲೆ ಮರಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಾರ್ಷಿಕವಾಗಿ ಅತೀ ಹೆಚ್ಚು ಮಳೆ ಬೀಳುವ ತಾಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಿನ ಶಾಂತಳ್ಳಿ ಹೋಬಳಿಯಾದ್ಯಂತ ವರ್ಷಧಾರೆ ಮುಂದುವರಿದಿದೆ. ಕಾಫಿ ಹಾಗೂ ಏಲಕ್ಕಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪಾಗಿದೆ.
ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೀಕಳ್ಳಿ, ನಡ್ಲಕೊಪ್ಪ, ಸಿಂಗನಹಳ್ಳಿ, ಹೆಮ್ಮನಗದ್ದೆ ಗ್ರಾಮಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ರೈತಾಪಿ ವರ್ಗ ಭತ್ತ ನಾಟಿಗಾಗಿ ಗದ್ದೆಗಳನ್ನು ಹದಗೊಳಿಸಿದ್ದು, ಸುರಿಯುತ್ತಿರುವ ಮಳೆ ಎಲ್ಲದಕ್ಕೂ ತಡೆಯೊಡ್ಡಿದೆ. ನಾಟಿಗಾಗಿ ಭತ್ತದ ಸಸಿಮಡಿಗಳು ತಯಾರಾಗಿದ್ದು, ಕೆಲವೆಡೆ ಗದ್ದೆಗಳಲ್ಲಿಯೇ ಸಸಿಮಡಿ ಕೊಳೆಯುತ್ತಿವೆ. ಇದರಿಂದಾಗಿ ನಾಟಿಕಾರ್ಯವೂ ವಿಳಂಬವಾಗುತ್ತಿದ್ದು, ರೈತಾಪಿ ವರ್ಗದಲ್ಲಿ ಆತಂಕ ಮನೆಮಾಡಿದೆ.
ಪ್ರಸಕ್ತ ವರ್ಷ ಇಲ್ಲಿಯವರೆಗೆ ಶಾಂತಳ್ಳಿಗೆ ಸರಾಸರಿ 130 ಇಂಚಿನಷ್ಟು ದಾಖಲೆಯ ಮಳೆಯಾಗಿದೆ. ಪುಷ್ಪಗಿರಿಬೆಟ್ಟ ತಪ್ಪಲಿನ ಹೆಗ್ಗಡಮನೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಈಗಾಗಲೇ 160 ಇಂಚಿನಷ್ಟು ಮಳೆಯಾಗಿದ್ದು, ಭಾರಿ ಮಳೆಗೆ ಗ್ರಾಮವಾಸಿಗಳು ತತ್ತರಿಸಿದ್ದಾರೆ.
ಕಳೆದ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆಗಮಿಸಿ ನಡುವೆ ಕೊಂಚ ಬಿಡುವು ನೀಡಿದ್ದರಿಂದ ಉತ್ತಮ ಕಾಫಿ ಫಸಲು ಕೈಸೇರಿತ್ತು. ಆದರೆ ಪ್ರಸಕ್ತ ಮಳೆ ಬಿಡುವು ನೀಡದೆ ಇರುವುದರಿಂದ ಭಾರಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನೂ ತಳ್ಳಿಹಾಕುವಂತಿಲ್ಲ.
ಇದೀಗ ಬಾಧಿಸುತ್ತಿರುವ ಕೊಳೆರೋಗದಿಂದ ಗಿಡಗಳಲ್ಲಿ ಕಾಫಿ ಎಲೆಗಳು ಕೊಳೆಯುತ್ತಿದ್ದು, ಕಾಫಿ ಫಸಲೂ ನೆಲ್ಕಕಚ್ಚುತ್ತಿವೆ. ಇದರೊಂದಿಗೆ ಕಾಳುಮೆಣಸು ಬಳ್ಳಿಯಲ್ಲಿಯೂ ಫಸಲು ಮೂಡದೇ ಇರುವುದು ಇನ್ನಷ್ಟು ಚಿಂತೆ ಮೂಡಿಸಿದೆ.