

ಧಾರವಾಡ: ಕಥೆಗಳು ಸಮುದಾಯವನ್ನು ಒಗ್ಗೂಡಿಸುವ ಶಕ್ತಿ ಹೊಂದಿದ್ದು ಸಾಮಾಜಿಕ ಮೌಲ್ಯಗಳ ಒಳನೋಟವನ್ನು ಹೊಂದಿವೆ ಎಂದು ಶಿವಮೊಗ್ಗದ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ.ಟಿ., ಎ.ಟಿ., ಬಿ.ಟಿ ಮತ್ತು ಎಚ್.ಟಿ ಸಾಸನೂರ ಸಹೋದರರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ -೨೭ ಕನ್ನಡ ಕಥನ ಪರಂಪರೆಯಲ್ಲಿ ವ್ಯಕ್ತಿ ಹಾಗೂ ಸಮಾಜ ವಿಷಯ ಕುರಿತು ಮಾತನಾಡಿದರು.
ಕಥನ ಪರಂಪರೆಯಲ್ಲಿ ಧರ್ಮ ಹಾಗೂ ಕುಟುಂಬ ವ್ಯವಸ್ಥೆ ಪ್ರಭುತ್ವ ಕುರಿತು ಪ್ರಶ್ನೆ ಮಾಡುವ ಸಂದರ್ಭಗಳನ್ನು ಕಾಣಬಹುದು. ಕಥೆಗಳಿಗೆ ಚಲನಶೀಲ ಗುಣವಿದ್ದು ಕ್ಷಣಕ್ಷಣಕ್ಕೂ ತನ್ನ ರೂಪ, ಶೈಲಿ, ಸ್ವರೂಪವನ್ನು ಬದಲಿಸುವ ಗುಣ ಹೊಂದಿವೆ. ಕೆಲ ಸಂದರ್ಭದಲ್ಲಿ ವಿಮರ್ಶೆಗೂ ಒಳಪಟ್ಟಿವೆ.
ಸಮುದಾಯದ ಸಂಘರ್ಷ ವಸಾಹತುಶಾಹಿ ಆಳ್ವಿಕೆ ಸಾಮಾಜಿಕ ನ್ಯಾಯ ಪರಿಪಾಲನೆ, ಪ್ಯೂಡಲ್ ವ್ಯವಸ್ಥೆಯ ಬಗ್ಗೆ ಒಪ್ಪಿಕೊಳ್ಳುವ, ತಿರಸ್ಕರಿಸುವ ಬಗ್ಗೆ ಉಲ್ಲೇಖಗಳಿವೆ. ಕುವೆಂಪು, ಗಳಗನಾಥ ಹಾಗೂ ಮಾಸ್ತಿಯವರ ಕಥೆಗಳಲ್ಲೂ ವಿಭಿನ್ನತೆ ಇರುತ್ತಿರುವುದನ್ನು ಕಾಣಬಹುದು. ಕಥೆಗಳು ನಮ್ಮ ಜೀವನದ ಮಾರ್ಗದರ್ಶನದಂತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಎಂ.ಟಿ. ಸಾಸನೂರ ಓರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೌಲ್ಯಾಧಾರಿತವಾದ ಜೀವನ ನಡೆಸಿ, ವೃತ್ತಿಯಲ್ಲಿ ಬದ್ಧತೆ ಹೊಂದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿ ಗುಣಮಟ್ಟದ ಶಿಕ್ಷಣವನ್ನು ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಮೂವರೂ ಸಹೋದರರಿಗೆ ನೀಡಿದರು. ಕೊಠಾರಿ ಆಯೋಗದ ಹೇಳಿಕೆಯಂತೆ ವಿದ್ಯಾರ್ಥಿಗಳನ್ನು ಅವರು ಸತ್ಪçಜೆಗಳನ್ನಾಗಿ ರೂಪಿಸಿದವರು. ಡಾ. ಜೇಂದ್ರ ಚೆನ್ನಿ ಅವರ ಉಪನ್ಯಾಸ ಚಿಂತನಶೀಲವಾಗಿತ್ತು . ಸಂಘರ್ಷಗಳು ಅಂದಿ ಇದ್ದವು ಇಂದೂ ಇವೆ. ಬಸವಾದಿ ಶರಣರು ಪ್ರಶ್ನೆ ಮಾಡುವ ಮೂಲಕ ವ್ಯಕ್ತಿ ಹಾಗೂ ಸಮಾಜ ತಿದ್ದುವ ಕೆಲಸ ಮಾಡಿದರು ಎಂದರು.
ಡಾ. ಶೈಲಜಾತ. ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.