ಇದ್ದೂ ಇಲ್ಲದಂತಾದ ಮಳಿಗೆಗಳು

22 vikram 1
Published on

ವಿಕ್ರಮ ನಾಡಿಗೇರ ಧಾರವಾಡ
ಕೃಷಿ ವಿಶ್ವ ವಿದ್ಯಾಲಯ ಎಂದಾಕ್ಷಣ ನೆನಪಾಗುವುದೇ ವಿನೂತನ ಸಂಶೋಧನೆ, ವಿವಿಧ ತಳಿಗಳ ಅಭಿವೃದ್ಧಿ.. ಈ ಎಲ್ಲ ಸಂಶೋಧನೆಗಳು ರಾಜ್ಯದ ಸಾಕಷ್ಟು ರೈತರಿಗೆ ಅನುಕೂಲವಾಗಿವೆ. ಈ ಎಲ್ಲ ಮಾಹಿಗಳು ರೈತರಿಗೆ ಒಂದೇ ಸೂರಿನಡಿ ಸುಲಭವಾಗಿ ಸಿಗಲಿ ಎಂಬ ಕಾರಣಕ್ಕಾಗಿಯೇ ಕೃಷಿ ಮೇಳ ಎಂಬ ಪರಿಕಲ್ಪನೆ ಆಯೋಜಿಸಲಾಗಿದೆ. ಆದರೆ ಈ ಮೇಳವು ಇತ್ತೀಚಿನ ದಿನಗಳಲ್ಲಿ ವಾಣಿಜ್ಯೀಕರಣದತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.
ಕೃಷಿ ಮೇಳಕ್ಕೆ ಆಗಮಿಸುವ ರೈತರು ಹೊಸ ಹೊಸ ಸಂಶೋಧನಾ ತಳಿಗಳು, ಹೆಚ್ಚು ಇಳುವರಿ ನೀಡುವ ಬೆಳೆ ಸೇರಿ ಭರಪೂರ ಮಾಹಿತಿ ಹೊತ್ತು ತಮ್ಮೂರಿನತ್ತ ಸಾಗುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಮೇಳದ ಪರಿಕಲ್ಪನೆಯ ಹಾದಿಯೇ ಬೇರೆಡೆ ಸಾಗುತ್ತಿದೆ. ಇದಕ್ಕೆ ಈ ಬಾರಿಯ ಮಳಿಗೆ ಹಂಚಿಕೆ ಪ್ರಕ್ರಿಯೆಯೇ ಸಾಕ್ಷಿ.
ರೈತರಿಗೆ ಅನುಕೂಲವಾಗುವಂತಹ ಅನೇಕ ವಿನೂತನ ಸಂಶೋಧನೆಗಳನ್ನು ಕೃಷಿ ವಿಶ್ವ ವಿದ್ಯಾಲಯ ಪ್ರತಿ ವರ್ಷ ಮಾಡುತ್ತಲೇ ಇದೆ. ಈ ಸಂಶೋಧನೆಗಳು ರೈತರಿಗೆ ತಲುಪಲಿ ಎಂದು ಆರಂಭವಾದ ಕೃಷಿ ಮೇಳದಲ್ಲಿ ಸಂಶೋಧನಾ ಕೇಂದ್ರಗಳಿಗೆ ಸಾಕಷ್ಟು ಮಳಿಗೆಗಳನ್ನು ಮೀಸಲು ಇಡಲಾಗುತ್ತದೆ. ಆದರೆ ಈ ಬಾರಿ ಸಂಶೋಧನಾ ಮಾಹಿತಿ ನೀಡುವ ಮಳಿಗೆಗಳು ಭವನದ ಯಾವುದೋ ಒಂದು ಮೂಲೆಯಲ್ಲಿ ಸೇರಿರುವುದು ರೈತರಿಗೆ ನಿರಾಸೆ ಉಂಟುಮಾಡಿದೆ.
ಮೇಳದಲ್ಲಿನ ಹೈಟೆಕ್​ ಮಳಿಗೆ ಆವರಣದಲ್ಲೇ ಐಸಿಎಆರ್​ ಕೃಷಿ ವಿಜ್ಞಾನ ಕೇಂದ್ರ, ಮಳೆ ನೀರು ಕೊಯ್ಲು ಮತ್ತು ಅದರ ಸದುಪಯೋಗ, ಮಣ್ಣು ಪರೀಕ್ಷೆ , ಕ್ಷೇತ್ರೀಯ ಹಾಗೂ ಪ್ರಾಂತೀಯ ಸಂಶೋಧನಾ ಕೇಂದ್ರ ಸೇರಿ ಕೃವಿವಿ ಅಭಿವೃದ್ಧಿಪಡಿಸಿದ ವಿವಿಧ ತಳಿಗಳು, ಹೆಚ್ಚು ಇಳುವರಿ ನೀಡುವ ಮೆಕ್ಕೆಜೋಳ, ಸೋಯಾಅವರೆ, ಹತ್ತಿ, ಕಬ್ಬು, ಸೇರಿ ಇನ್ನೂ ಅನೇಕ ತಳಿಗಳ ಮಾಹಿತಿ ನೀಡುವ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲ ಮಳಿಗೆಗಳನ್ನು ರೈತರ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದು ರೈತರಿಗೆ ಸರಿಯಾದ ಮಾಹಿತಿ ಸಹ ಇಲ್ಲ. ಹೀಗಾಗಿ ರೈತರು ಸಂಶೋಧನಾ ಮಳಿಗೆಗಳನ್ನು ಹುಡುಕುತ್ತಲೇ ಹೈರಾಣಾಗುತ್ತಿದ್ದಾರೆ.
ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ, ಔಷಧೀಯ ಸಸ್ಯಗಳು, ಕೀಟ ಪ್ರಪಂಚ ಸೇರಿ ಇತರ ಪ್ರದರ್ಶನ ಮಾತ್ರ ಇರಲಿದೆ ಎಂಬುದು ಎಲ್ಲ ರೈತರಿಗೂ ತಿಳಿದ ವಿಷಯ. ಇದೇ ಕಾರಣಕ್ಕಾಗಿ ಬಹುತೇಕ ರೈತರು ಕೇಂದ್ರದ ಬಳಿ ಸುಳಿಯದೇ ಸಾಮಾನ್ಯ ಮಳಿಗೆಗಳ ಆವರಣದಲ್ಲೇ ವೀಕ್ಷಣೆ ನಡೆಸುತ್ತಾರೆ. ಆದರೆ ಈ ಬಾರಿ ಸಂಶೋಧನಾ ಮಳಿಗೆಗಳನ್ನು ಕೇಂದ್ರದಲ್ಲಿ ಅಳವಡಿಸಿದ್ದರಿಂದ ರೈತರು ಹೊಸ ಸಂಶೋಧನೆ, ತಳಿಗಳ ಮಾಹಿತಿಯಿಂದ ವಂಚಿತರಾದಂತಾಗಿದೆ.
ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮಳಿಗೆಗಳನ್ನು ಸ್ಥಾಪಿಸಿರುವ ಕುರಿತು ಎಲ್ಲಿಯೂ ಮಾಹಿತಿ ನೀಡಿಲ್ಲ. ಹೀಗಾಗಿ ಸಂಶೋಧನೆ, ಹೊಸ ತಳಿಗಳ ಮಾಹಿತಿ ಮಳಿಗೆಗಳನ್ನು ಸ್ಥಾಪಿಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿವೆ.
ಬೆರಳೆಣಿಕೆಯಷ್ಟು ಜನರ ಭೇಟಿ: ಶನಿವಾರದಿಂದ ಆರಂಭವಾದ ಕೃಷಿ ಮೇಳಕ್ಕೆ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ಆದರೆ ಸಂಶೋಧನಾ ಮಳಿಗೆಗಳಿಗೆ ಈವರೆಗೆ 25-50 ಜನರು ಮಾತ್ರ ಭೇಟಿ ನೀಡಿದ್ದಾರೆ. ಯಾರೊಬ್ಬರೂ ಮಳಿಗೆಗೆ ಬಾರದ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ಕುಳಿತಿರುವ ವಿಜ್ಞಾನಿಗಳೂ ಬೇಸರದಲ್ಲೇ ಕಾಲ ಕಳೆಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net