

ಕೆ.ಕೆಂಚಪ್ಪ ಮೊಳಕಾಲ್ಮೂರು
ಒಂದೆಡೆ ರಾಜ್ಯದ ಬಹುತೇಕ ಜಲಾಶಯಗಳು ಮೈದುಂಬಿ ಹರಿಯುತ್ತಿದ್ದರೆ, ಇತ್ತ ಬಯಲುಸೀಮೆ ಮೊಳಕಾಲ್ಮೂರು ಪಟ್ಟಣಕ್ಕೆ ಕುಡಿಯುವ ನೀರಿನ ಆಸರೆಯಾಗಿರುವ ಏಕೈಕ ಜಲಮೂಲ ರಂಗಯ್ಯನದುರ್ಗ ಜಲಾಶಯದಲ್ಲಿ ನೀರು ತಳ ಸೇರಿದೆ.
ಅರ್ಧ ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದ ತಗ್ಗು ಪ್ರದೇಶದಲ್ಲಿ ಕೇವಲ 7 ಅಡಿ ಮಾತ್ರ ನೀರಿದ್ದು, ಮುಂಬರುವ ದಿನಗಳಲ್ಲಿ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.
ಯಾವುದೇ ನದಿಮೂಲಗಳಲ್ಲಿದ ತಾಲೂಕಿನಲ್ಲಿ ಜನ, ಜಾನುವಾರುಗಳಿಗೆ ನೀರಿನ ಆಶ್ರಯಕ್ಕೆ ಕೆರೆ, ಕಟ್ಟೆ ಹಾಗೂ ಇರುವುದೊಂದೇ ಜಲಾಶಯ. ಇವು ಬಿಟ್ಟರೆ ಬೇರಾವುದೇ ಆಸರೆಯಿಲ್ಲ.
ಮಳೆ ಕೈಕೊಟ್ಟರೆ ಜನರನ್ನು ದೇವರೇ ಕಾಪಾಡಬೇಕು. ಹಣ ಕೊಟ್ಟರೂ ನೀರು ಸಿಗದ ಪರಿಸ್ಥಿತಿ ಇಲ್ಲಿನದು. ಬರ ನೀಗಿ ಈ ವರ್ಷ ಮಳೆ-ಬೆಳೆ ಆಗಬಹುದು ಎಂಬ ನಂಬಿಕೆ ಹುಸಿಯಾಗಿದೆ. ಮಳೆ ಕೊರತೆ ಕರಿನೆರಳಾಗಿ ಕಾಡಲಾರಂಭಿಸಿದೆ.
ಡಿ.ದೇವರಾಜು ಅರಸು 1969ರಲ್ಲಿ ಸಿಎಂ ಆಗಿದ್ದಾಗ ದೊಡ್ಡ ಮೊತ್ತದ ಅನುದಾನ ಮೀಸಲಿಟ್ಟು ರಂಗಯ್ಯನದುರ್ಗ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಎರಡು ಗುಡ್ಡಗಳ ನಡುವೆ ಅಡ್ಡಲಾಗಿ ನಿರ್ಮಾಣವಾಗಿರುವ ಡ್ಯಾಂ 360 ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಡ್ಯಾಂ ನಿರ್ಮಾಣವಾದಾಗಿನಿಂದ 4-5 ಬಾರಿ ಮಾತ್ರ ಭರ್ತಿಯಾಗಿದೆ. ಭರ್ಜರಿ ಮಳೆ ಬಂದರಷ್ಟೇ ಹೊಸ ನೀರು ಕಾಣುತ್ತದೆ.
ಕಳೆದ 15 ವರ್ಷದಲ್ಲಿ ಹತ್ತಾರು ಚೆಕ್ ಡ್ಯಾಂಗಳು, ದೊಡ್ಡ ಮಟ್ಟದ ಬ್ಯಾರೇಜ್‌ಗಳು ನಿರ್ಮಾಣವಾದ ಕಾರಣ ಜಲಾಶಯಕ್ಕೆ ನೀರು ಹರಿದು ಬರುವ ಎಲ್ಲ ಮೂಲಗಳು ತಪ್ಪಿ ಹೋಗಿವೆ. ಭದ್ರಾ ಮೇಲ್ದಂಡೆ ಯೋಜನೆಯೊಂದೇ ಮುಂದಿರುವ ಭರವಸೆ, ಅದು ಬಿಟ್ಟರೆ ಬೇರೊಂದು ಮಾರ್ಗವಿಲ್ಲ.
2011-12ನೇ ಸಾಲಿನಲ್ಲಿ ರಾಜೀವ್‌ಗಾಂಧಿ ಸಬ್ ಮಿಷನ್ ಯೋಜನೆಯಡಿ ಮೊಳಕಾಲ್ಮೂರು ಸೇರಿ 11 ಹಳ್ಳಿಗಳಿಗೆ ಡ್ಯಾಂನಿಂದ ಕುಡಿಯುವ ನೀರಿನ ವ್ಯವಸ್ತೆಗೆ 15 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಪೈಪ್‌ಲೈನ್, ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿತ್ತು.
ಇನ್ನೇನು ನೀರು ಹರಿಸಬೇಕೆಂಬ ಹಂತದಲ್ಲಿ ಬರ ಎದುರಾಗಿದ್ದರಿಂದ ಯೋಜನೆ ಇವತ್ತಿಗೂ ಸಕಾರವಾಗದೆ ಮಾಡಿದ ಪ್ರಯತ್ನವೆಲ್ಲ ಮಣ್ಣು ಪಾಲಾಗಿದೆ.
ಈ ಹಿಂದೆ ಎರಡು ಬಾರಿ ಜಲಾಶಯ ತುಂಬಿದಾಗ 8-10 ಗ್ರಾಮಗಳ 6500 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಭತ್ತ, ರಾಗಿ, ಮಕ್ಕೇಜೋಳ ಇತ್ಯಾದಿ ಬೆಳೆ ಬೆಳೆದುಕೊಂಡಿದ್ದರು.
ಕಾಲಾನಂತರ ಮಳೆಯ ಅಭಾವ ಎದುರಾಗಿ ಮೊಳಕಾಲ್ಮೂರು ಪಟ್ಟಣಕ್ಕೆ ಮಾತ್ರ ಕುಡಿವ ನೀರು ಸೀಮಿತವಾಗಿತ್ತು. ಅದಕ್ಕೂ ಈಗ ಕುತ್ತು ಬಂದಿದೆ.
ಶಾಸಕರಿಗೆ ಬೇಕು ಇಚ್ಛಾಶಕ್ತಿ: ರಂಗಯ್ಯನದುರ್ಗ ಜಲಾಶಯಕ್ಕೆ ಭ್ರದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುವ ಮುನ್ನ ಅದನ್ನು ಪುನಶ್ಚೇತನಗೊಳಿಸಬೇಕಿದೆ. ಜತೆಗೆ ಕೂಡ್ಲಿಗಿ ಭಾಗದಿಂದ ಬರುವ ಜಲಮೂಲವನ್ನು ಶಿಡ್ಲಹಳ್ಳದ ಮೂಲಕ ಹರಿಸುವ ಮಾತು ಮುನ್ನಲೆಗೆ ಬಂದಿತ್ತಾದರೂ ಅದು ತಟಸ್ಥವಾಗಿದೆ. ಸದ್ಯ ನೀರಿನ ಅಭಾವ ಸರಿದೂಗಿಸಲು ಸ್ಥಳೀಯ ಶಾಸಕರು ಇಚ್ಛಾಶಕ್ತಿ ತೋರಬೇಕು ಎಂಬುದು ರೈತಮುಖಂಡರಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಜಿಂಕಾ ಶ್ರೀನಿವಾಸ್, ಹಾನಗಲ್ ಸೂರಯ್ಯ, ಎಸ್.ಟಿ.ಚಂದ್ರಣ್ಣ, ಎಸ್.ಮಂಜುನಾಥ, ರವಿಕುಮಾರ್ ಇತರರ ಒತ್ತಾಸೆ.
ಬಯಲುಸೀಮೆ ಜನರ ಬದುಕು ಹಸನಾಗಲು ಕೆರೆಗಳಿಗೆ ನೀರು ತುಂಬುವ ಕೆಲಸ ಬೇಗ ಆಗಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಪ್ರಸ್ತುತ ಮಳೆ ಕೊರತೆ ನಿದ್ದೆಗೆಡಿಸಿದೆ. ಪರಿಸ್ಥಿತಿ ನೋಡಿಕೊಂಡು ಪರ್ಯಾಯ ಮಾರ್ಗ ಅನುಸರಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಡ್ಯಾಂನ ಎಡ ಮತ್ತು ಬಲದಂಡೆ ನಾಲಾ ಅಭಿವೃದ್ಧಿಗೆ 3.50 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಕೆರೆಗಳ ಪುನಶ್ಚೇತನಕ್ಕೂ ಆದ್ಯತೆ ಕೊಡಲಾಗಿದೆ.ಎನ್.ವೈ.ಗೋಪಾಲಕೃಷ್ಣ, ಶಾಸಕ