ಔಷಧಿ ವ್ಯವಸ್ಥೆ ನಿಲ್ಲಿಸಿರುವುದು ಖಂಡನೀಯ

Published on

ಬೈಂದೂರು: ಪ್ರಸ್ತುತ ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳಲ್ಲಿ ಗುಣಮಟ್ಟದ, ಕಡಿಮೆ ದರದಲ್ಲಿ ಜನರಿಕ್ ಔಷಧಗಳು ಬಡ ರೋಗಿಗಳಿಗೆ ದೊರಕುತ್ತಿವೆ. ಆದರೆ ದಿನ ನಿತ್ಯ ಔಷಧ ಬಳಸುವ ಮಧುಮೇಹ, ಬಿಪಿ, ಶುಗರ್ ಮುಂತಾದ ಕಾಯಿಲೆ ಇರುವ ಬಡವರಿಗೆ ಅಗ್ಗದ ದರದಲ್ಲಿ ಔಷಧ ಸಿಗುವ ವ್ಯವಸ್ಥೆ ಇರುವುದನ್ನು ನಿಲ್ಲಿಸಲು ಹೊರಟಿರುವುದು ಖಂಡನೀಯ ಎಂದು ಶಾಸಕ ಗುರುರಾಜ್ ಗಂಟಿಹೊಳೆ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡಲಾಗುತ್ತದೆ. ಹಾಗಾಗಿ ಜನೌಷಧ ಕೇಂದ್ರಗಳ ಅಗತ್ಯವಿಲ್ಲ ಎಂದು ಹೇಳುವ ಸರ್ಕಾರ ಹಲವು ಔಷಧ, ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ಇರುವ ವಿಚಾರ ಗೊತ್ತಿದೆಯೇ, ಸರ್ಕಾರಿ ಆಸ್ಪತ್ರೆ ಒಳಗಿನ ಮೆಡಿಕಲ್ ಮಾಫಿಯಾಕ್ಕೆ ಸರ್ಕಾರ ಬಲಿಯಾಯಿತೇ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಗಳು ಸಮರ್ಪಕವಾಗಿ ಸಿಗುತ್ತಿವೆಯಾದರೆ ಸಿಗಲಿ. ಇಂತಹ ಪರಿಸ್ಥಿತಿ ಇದ್ದರೆ ಜನೌಷಧ ಕೇಂದ್ರ ನಡೆಸುವವರು ಕೇಂದ್ರ ನಡೆಸಲಾಗದೇ ತಾನೇ ತಾನಾಗಿ ಮುಚ್ಚುತ್ತಾರೆ.

ಅದನ್ನು ಬಿಟ್ಟು ಸರ್ಕಾರವೇ ಮುತುವರ್ಜಿ ವಹಿಸಿ ಮುಚ್ಚಲು ಆದೇಶ ನೀಡಿರುವುದರ ಹಿಂದಿನ ಮರ್ಮವೇನು? ಸರ್ಕಾರಕ್ಕೆ ಜನ ಸಾಮಾನ್ಯರ ಆರೋಗ್ಯದ ವಿಚಾರದಲ್ಲಿ ಬದ್ಧತೆ ಇದ್ದರೆ ನಕಲಿ ಮಾತ್ರೆ, ಔಷಧಿ ಜಾಲ, ನಕಲಿ ಕ್ಲಿನಿಕ್ ಹುಡುಕಿ ಮಟ್ಟ ಹಾಕಲಿ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳು ವೈದ್ಯರು, ಅಗತ್ಯ ಸಿಬ್ಬಂದಿ ಕೊರತೆ, ಸಿಬ್ಬಂದಿ ಕಡಿತದಿಂದ ನಲುಗುತ್ತಿದ್ದು, ಜನ ಸಾಮಾನ್ಯರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಡಿಮೆ ದರದಲ್ಲಿ ಸಿಗುತ್ತಿದ್ದ ಔಷಧಿಗಳನ್ನು ಸಿಗದಂತೆ ಮಾಡಲು ಹೊರಟಿರುವುದು ಬಡ ರೋಗಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿ ಅವರ ಜೀವದೊಂದಿಗೆ ಚೆಲ್ಲಾಟವಾಡಲು ಹೊರಟಿದೆ. ಇದು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ. ಹಾಗಾಗಿ ಸರ್ಕಾರ ಈ ನಿರ್ಧಾರ ವಾಪಸ್ ತೆಗೆದುಕೊಳ್ಳಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net