ಸೂಯೇಜ್ ಫಾರ್ಮ್‌ಗೆ ತ್ಯಾಜ್ಯ ಪೂರೈಕೆ ಸ್ಥಗಿತ

sewage farm mysore
Published on

ಮೈಸೂರು: ಸೂಯೇಜ್ ಫಾರ್ಮ್‌ನಲ್ಲಿ ಎರಡೂವರೆ ದಶಕದಿಂದ ಸಂಗ್ರಹವಾಗಿರುವ ತ್ಯಾಜ್ಯ ಬೆಟ್ಟದ ರೀತಿಯಲ್ಲಿ ಬೆಳೆದು ನಿಂತಿದ್ದು, ಈ ತ್ಯಾಜ್ಯ ವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಸೂಯೇಜ್ ಫಾರ್ಮ್‌ಗೆ ತ್ಯಾಜ್ಯ ಸರಬರಾಜು ಸ್ಥಗಿತಗೊಳಿಸಲಾಗಿದೆ.

ಪ್ರಸ್ತುತ ಪ್ರತಿಯೊಂದು ಮನೆಗಳಿಂದ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಡೆಯಲಾಗುತ್ತಿದೆ. ಈ ತ್ಯಾಜ್ಯವನ್ನು ಸೂಯೇಜ್ ಫಾರ್ಮ್‌ನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತಿತ್ತು. ರಸ್ತೆ ಬದಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸೂಯೇಜ್‌ಫಾರ್ಮ್‌ನಲ್ಲಿ ಲ್ಯಾಂಡ್‌ಫಿಲ್ಲಿಂಗ್ ಮಾಡಲಾಗುತಿತ್ತು. ಲ್ಯಾಂಡ್ ಫಿಲ್ಲಿಂಗ್‌ನಿಂದ ಸೂಯೇಜ್‌ಫಾರ್ಮ್‌ನಲ್ಲಿ ಮತ್ತೆ ತ್ಯಾಜ್ಯದ ರಾಶಿ ಬೆಳೆಯಲಿದ್ದು, ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮಾಡಿ ತೆರವುಗೊಳಿಸುವವರೆಗೆ ಹೊಸ ಕಸವನ್ನು ಲ್ಯಾಂಡ್‌ಫಿಲ್ ಮಾಡದಂತೆ ಟೆಂಡರ್‌ದಾರರ ಮನವಿಗೆ ಸ್ಪಂದಿಸಿ ನಗರ ಪಾಲಿಕೆಯು ಇದೀಗ ಸೂಯೇಜ್ ಫಾರ್ಮ್‌ಗೆ ತ್ಯಾಜ್ಯ ಸಬರಾಜು ಸ್ಥಗಿತಗೊಳಿಸಿ ಕೆಸರೆ ಹಾಗೂ ರಾಯನಕೆರೆ ಘಟಕಕ್ಕೆ ಕಳುಹಿಸುತ್ತಿದೆ.

ಅಧಿಕಾರಿಗಳ ಸಭೆ:

ಸೂಯೇಜ್ ಫಾರ್ಮ್‌ಗೆ ತ್ಯಾಜ್ಯ ಸರಬರಾಜು ಸ್ಥಗಿಗೊಳಿಸುವ ತೀರ್ಮಾನ ಕೈಗೊಂಡ ನಂತರ ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಕುರಿತು ನಗರ ಪಾಲಿಕೆ ಅಧಿಕಾರಿಗಳು ಗುರುವಾರ ಸಭೆ ನಡೆಸಿ ಚರ್ಚಿಸಿದರು. ಅಂತಿಮವಾಗಿ ರಾಯನಕೆರೆ ಹಾಗೂ ಕೆಸರೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ.

ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ಉತ್ಪತಿಯಾಗುತ್ತಿದ್ದು, ಸೂಯೇಜ್‌ಫಾರ್ಮ್‌ನಲ್ಲಿ 200 ಟನ್‌ನಷ್ಟು ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಘಟಕ ಇದೆ. ಇದೀಗ ಹೊಸದಾಗಿ ಕೆಸರೆಯಲ್ಲಿ 22 ಕೋಟಿ ರೂ.ವೆಚ್ಚದಲ್ಲಿ 200 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ರಾಯನಕೆರೆಯಲ್ಲಿ 9.2 ಕೋಟಿ ರೂ.ವೆಚ್ಚದಲ್ಲಿ 150 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡ ಲಾಗಿದೆ.

3.08 ಲಕ್ಷ ಟನ್ ತ್ಯಾಜ್ಯ ಸಂಗ್ರಹ:

ಸೂಯೇಜ್‌ಫಾರ್ಮ್‌ನಲ್ಲಿ ಒಟ್ಟು 3.08 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು 58 ಕೋಟಿ ರೂ.ಮೊತ್ತ ವಿನಿಯೋಗಿಸಲಾಗುತ್ತಿದೆ. ಮೈಸೂರಿನಂತೆ ಮಹಾರಾಷ್ಟ್ರದ ನಾಗಪುರದಲ್ಲೂ ಹಳೆಯ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ನಂತರ ನಾಗಪುರ ನಗರ ಸ್ಥಳೀಯ ಸಂಸ್ಥೆಯು ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸುವ ತೀರ್ಮಾನ ಕೈಗೊಂಡಿತ್ತು. ನಗರ ಪಾಲಿಕೆಯ ತಂಡ ವರ್ಷದ ಹಿಂದೆ ನಾಗಪುರಕ್ಕೆ ಭೇಟಿ ನೀಡಿ ನಾಗಪುರದಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿತ್ತು. ಇದೀಗ ನಾಗಪುರದ ಮಾದರಿಯಲ್ಲಿ ನಗರದ ಸೂಯೇಜ್ ಫಾರ್ಮ್‌ನಲ್ಲಿರುವ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಕೈಗೊಳ್ಳಲಾಗಿದೆ.

ನಾಗಪುರದಲ್ಲಿ ಪ್ರತಿನಿತ್ಯ 800 ರಿಂದ 1,000 ಟನ್ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲಾಗಿದೆ. ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತಿದ್ದು, ಪ್ಟಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಣ್ಣನ್ನು ಲ್ಯಾಂಡ್‌ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲೂ ಕೂಡ ಅನುಸರಿಸಲಾಗುವುದು.

ಹೈಕೋರ್ಟ್‌ನಲ್ಲಿ ತಕರಾರರು ಅರ್ಜಿ

ವಿದ್ಯಾರಣ್ಯಪುರಂನ ಸುಯೇಜ್ ಫಾರ್ಮ್‌ನಲ್ಲಿ ಸಂಗ್ರಹವಾಗಿರುವ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು ಕರೆದಿದ್ದ ಟೆಂಡರ್‌ನಲ್ಲಿ ಲೋಪವಾಗಿದೆ ಎಂದು ಬೆಂಗಳೂರಿನ ಎಂಎಸ್ ಜತೀನ್ ಇನ್ಫ್ರಾ ಸಂಸ್ಥೆಯು ಹೈಕೊರ್ಟ್‌ನಲ್ಲಿ ತಕರಾರರು ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸಮಗ್ರ ವರದಿ ಹಾಗೂ ಟೆಂಡರ್ ಕುರಿತು ಮಾಹಿತಿಯನ್ನು ನೀಡುವಂತೆ ಸರ್ಕಾರ ನಗರ ಪಾಲಿಕೆಗೆ ನಿರ್ದೇಶನ ನೀಡಿದೆ. ಟೆಂಡರ್ ವಿಚಾರದಲ್ಲಿ ಹೈಕೋರ್ಟ್ ನೀಡುವ ತೀರ್ಪಿಗಾಗಿ ಇದೀಗ ಎಲ್ಲರು ಎದುರು ನೋಡುತ್ತಿದ್ದಾರೆ.

ಸೂಯೇಜ್‌ಫಾರ್ಮ್‌ನಲ್ಲಿ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸುವ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೂಯೇಜ್ ಫಾರ್ಮ್‌ಗೆ ಸರಬರಾಜು ಆಗುತ್ತಿದ್ದ ತ್ಯಾಜ್ಯವನ್ನು ಕೆಸರೆ ಹಾಗೂ ರಾಯನಕೆರೆ ಘಟಕಕ್ಕೆ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡಿದರೆ ತ್ಯಾಜ್ಯ ಸಂಸ್ಕರಣೆಗೆ ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಜನರು ಸಹಕಾರ ನೀಡಬೇಕು.
ಕೆ.ಜೆ.ಸಿಂಧು, ಉಪ ಆಯುಕ್ತೆ (ಅಭಿವೃದ್ದಿ)

ಸೂಯೇಜ್‌ಫಾರ್ಮ್‌ಗೆ ತ್ಯಾಜ್ಯ ಸರಬರಾಜು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಕುರಿತು ಸಭೆ ನಡೆಸಿ ಚರ್ಚಿಸಲಾಗಿದ್ದು, ಸದ್ಯಕ್ಕೆ ಕೆಸರೆ ಹಾಗೂ ರಾಯನಕೆರೆಗೆ ತ್ಯಾಜ್ಯವನ್ನು ಸರಬರಾಜು ಮಾಡಲಾಗುವುದು. ನಗರದಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ಸಂಸ್ಕರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗುವುದು.
ಡಾ. ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net