

ಬೆಂಗಳೂರು: ಬೇಸಿಗೆ ವೇಳೆ ತಲೆದೋರಿದ್ದ ಕುಡಿಯುವ ನೀರಿನ ಅಭಾವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಹೊಸ ವಲಯಗಳಲ್ಲಿ ನಾಗರಿಕರಿಗೆ ಸಿಂಟೆಕ್ಸ್ ಟ್ಯಾಂಕ್ ಮೂಲಕ ವಿತರಿಸುತ್ತಿದ್ದ ಉಚಿತ ನೀರು ವ್ಯವಸ್ಥೆಯನ್ನು ಜಲಮಂಡಳಿ ಸ್ಥಗಿತಗೊಳಿಸಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ತೀವ್ರ ನೀರಿನ ಸಮಸ್ಯೆ ಕಾರಣ ಜಲಮಂಡಳಿಯು ಬಡವರು ಹಾಗೂ ಕೊಳೆಗೇರಿ ಜನರು ವಾಸಿಸುತ್ತಿದ್ದ ಪ್ರದೇಶಗಳಲ್ಲಿ ಮೊದಲ ಬಾರಿಗೆ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಸ್ಥಾಪಿಸಿ ಅದರ ಮೂಲಕ ಉಚಿತ ನೀರು ಪೂರೈಕೆಗೆ ಚಾಲನೆ ನೀಡಿತ್ತು. ಇದು ಸ್ಥಳೀಯ ಜನರಿಗೆ ಹೆಚ್ಚಿನ ಉಪಯೋಗವಾಗುತ್ತಿತ್ತು. ಕಾವೇರಿ ನೀರು ಪೂರೈಕೆ ಇಲ್ಲದ ಸ್ಥಳಗಳಲ್ಲೇ ಇಂತಹ ವ್ಯವಸ್ಥೆ ಮಾಡಿದ್ದರಿಂದ ಕುಡಿಯುವ ನೀರಿನ ಬವಣೆ ನೀಗಿಸಲಾಗಿತ್ತು. ಆದರೀಗ ಮಳೆಗಾಲ ಆರಂಭವಾಗಿರುವ ನೆಪ ಮಾಡಿ ಜಲಮಂಡಳಿಯು ಉಚಿತ ನೀರು ಪೂರೈಕೆಯನ್ನು ಬಂದ್ ಮಾಡಿದೆ.
ಜಲಮಂಡಳಿಯು ಹೊಸ ವಲಯಗಳಲ್ಲಿ ಸುಮಾರು 582 ಕಡೆಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ ಸ್ಥಾಪಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷರ ಹೊಸ ಆಲೋಚನೆಯಂತೆ ರಾಜಧಾನಿಯಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಜಾರಿ ಮಾಡಿದ್ದು ನಾಗರಿಕರಲ್ಲಿ ಸಂತಸ ಮೂಡಿಸಿತ್ತು. ಪ್ರತೀ 2-3 ದಿನಕ್ಕೊಮ್ಮೆ 2 ಸಾವಿರ ಲೀ. ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್‌ಗೆ ಜಲಮಂಡಳಿ ತನ್ನ ಟ್ಯಾಂಕರ್‌ಗಳಿಂದ ನೀರು ತುಂಬಿಸಿ ಬಡವರಿಗೆ ಅನುಕೂಲ ಕಲ್ಪಿಸಿತ್ತು. ಕಳೆದೊಂದು ವಾರದಿಂದ ಉಚಿತ ನೀರು ನಿಲ್ಲಿಸಲಾಗಿದೆ. ತಾತ್ಕಾಲಿಕ ವ್ಯವಸ್ಥೆ ಆಗಿದ್ದರಿಂದ ಜೂನ್ ತಿಂಗಳಾಂತ್ಯದವರೆಗೆ ಮಾತ್ರ ಪೂರೈಕೆಗೆ ಅವಕಾಶ ಇತ್ತು ಎಂದು ಜಲಮಂಡಳಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಇದೆ ಜಲ ಸಮಸ್ಯೆ:
ಬಿಬಿಎಂಪಿಯ 110 ಹಳ್ಳಿಗಳು ಹಾಗೂ ಹೊಸ ವಲಯಗಳ ಹಲವೆಡೆ ಇನ್ನೂ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಜನರು ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ. ಕೊಳವೆಬಾವಿಗಳಲ್ಲಿ ನೀರಿನ ಮೂಲ ಕಡಿಮೆಯಾಗುತ್ತಿರುವ ಕಾರಣ ಪೂರೈಕೆ ಏರುಪೇರಾಗಿದೆ. ಈ ಕಾರಣದಿಂದಲೇ ಕೊರತೆಯಾಗುವ ಪ್ರಮಾಣವನ್ನು ಉಚಿತ ನೀರಿನ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಲಾಗಿತ್ತು. ಹೊಸ ವ್ಯವಸ್ಥೆಯಿಂದಾಗಿ ಕುಡಿಯುವ ನೀರಿಗಾಗಿ ಜನರ ಪರದಾಟ ನಿಂತಿತ್ತು. ಆದರೂ ಗೃಹೇತರ ಕೃತ್ಯಕ್ಕಾಗಿ ಜಲ ಅಭಾವ ಮುಂದುವರಿದಿದ್ದು, ಈಗ ಉಚಿತ ನೀರನ್ನು ಸ್ಥಗಿತಗೊಳಿಸಿರುವುದರಿಂದ ಮತ್ತೆ ನೀರಿನ ಸಮಸ್ಯೆ ಮುನ್ನೆಲೆಗೆ ಬಂದಿದೆ.
ಜುಲೈವರೆಗೂ ಮುಂದುವರಿಸಲು ಆಗ್ರಹ:
ಪ್ರಸ್ತುತ ಮಳೆಗಾಲ ಆರಂಭವಾಗಿದ್ದರೂ, ಅಂತರ್ಜಲ ಹೆಚ್ಚಳವಾಗಿಲ್ಲ. ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿಲ್ಲ. ಒಂದು ಮಳೆಗೆ ಅಂತರ್ಜಲ ಏರದು ಎಂಬ ಅಂಶನ್ನು ಜಲಮಂಡಳಿ ಅಧಿಕಾರಿಗಳು ಅರಿಯಬೇಕಿತ್ತು. ಆದರೆ, ದೂರಾಲೋಚನೆ ಮಾಡದೆ ಏಕಾಏಕಿ ಉಚಿತ ನೀರು ಪೂರೈಕೆ ಬಂದ್ ಮಾಡಿದ್ದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಸಿಂಟೆಕ್ಸ್ ಟ್ಯಾಂಕ್‌ಗಳ ಮೂಲಕ ಉಚಿತ ನೀರು ಪೂರೈಸುವ ವ್ಯವಸ್ಥೆಯನ್ನು ಜುಲೈ ತಿಂಗಳಿನವರೆಗೂ ಮುಂದುವರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.